ಖುಷಿ

ಪೋಸ್ಟರ್ ಬಾಕ್ಸ್

ತಪ್ಪದೇ ನೋಡಿ...ಇಂದೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ...ನಿಮಗೆ ದೀಪಾವಳಿ ಉಡುಗೊರೆ...

ಪೋಸ್ಟರ್ ಬಾಕ್ಸ್
Published On :

ತಪ್ಪದೇ ನೋಡಿ...
ಇಂದೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ...
ನಿಮಗೆ ದೀಪಾವಳಿ ಉಡುಗೊರೆ...
ಕಣ್ಣು ಮುಚ್ಚುವ ಮುನ್ನ ಕಣ್ತೆರೆಯಿರಯ್ಯಾ, ಕಣ್ತೆರೆದು ಮುಕ್ತಿ ಮಾರ್ಗವ ಕಾಣಿರಯ್ಯಾ...
ನಿಮ್ಮೂರಿನ ಚಿತ್ರಮಂದಿರಗಳಲ್ಲಿ....
ನೋಡಿ ಆನಂದಿಸಿ...
ಇಂಥ ಅಪ್ಪಟ ಕನ್ನಡ ಸೊಗಸಿನ ಘೋಷಣೆಗಳನ್ನು ಓದುತ್ತಿದ್ದರೆ ಹಳೇ ಕಾಲದ ಸಿನಿಮಾ ಪೋಸ್ಟರ್‌ಗಳು ನೆನಪಾಗದಿರಲು ಸಾಧ್ಯವಿಲ್ಲ ಬಿಡಿ. ಖುಷಿಯಾಗಿ, ಬಾಯಿತುಂಬಾ, ಯಾವ ಅಶ್ಲೀಲವೂ ಇಲ್ಲದಂತೆ ಓದಿಸಿಕೊಳ್ಳುವ ಮತ್ತು ನೋಡಿಸಿಕೊಳ್ಳುವ ಆ ಪೋಸ್ಟರ್‌ಗಳ ಕಾಲ ಈಗಿಲ್ಲದಿರಬಹುದು. ಟಿವಿ, ಯೂಟ್ಯೂಬ್, ಫೇಸ್‌ಬುಕ್‌ಗಳಲ್ಲಿ ತಮಟೆ ಬಾರಿಸುವ ಮೂಲಕವೇ ತಮ್ಮ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಹರಸಾಹಸ ಪಡುವವರ ನಡುವೆ ಇಂಥ ಪೋಸ್ಟರ್‌ಗಳು ನಗಣ್ಯ ಬಿಡಿ. ಆದರೆ, ಆಗಿನವರಿಗೆ ಗೋಡೆ, ಪೋಸ್ಟರು ಬಿಟ್ಟರೆ ಬೇರೇನು ಇತ್ತು? ಅವು ಸಿಂಗಲ್ ಕಲರ್ ವಾಲ್‌ಪೋಸ್ಟರ್‌ಗಳು. ಅದರಲ್ಲೇ ತಮ್ಮೆಲ್ಲ ಚಮತ್ಕಾರಗಳನ್ನು ತೋರಿಸಬೇಕಿತ್ತು.
ಸುಮ್ಮನೆ ಒಮ್ಮೆ ಹಳೇ ಪೋಸ್ಟರ್‌ಗಳನ್ನು ನೋಡಿ. ಅಲ್ಲಿ ಪ್ರೇಕ್ಷಕರನ್ನು ದಿಕ್ಕು ತಪ್ಪಿಸುವ ಯಾವ ಗಿಮಿಕ್ಕು, ಮ್ಯಾಜಿಕ್ಕು, ವಿವಾದದ ಹುಳಿ ಇಲ್ಲ. ನೇರ, ದಿಟ್ಟ, ನಿರಂತರ. ಸ್ಪಷ್ಟ ಭಾಷೆ. ಮೂರನೇ ವಾರದ ಪ್ರದರ್ಶನ ಕಾಣುತ್ತಿದ್ದ 'ಬಂಗಾರದ ಮನುಷ್ಯ' ಚಿತ್ರದ ಪೋಸ್ಟರನ್ನೇ ತೆಗೆದುಕೊಳ್ಳಿ, 'ಪ್ರತಿ ಮನೆ ಮನೆಯಲ್ಲೂ ನಡೆದಿರಬಹುದಾದ ಮನ ಮುಟ್ಟುವ ಸನ್ನಿವೇಶ, ಸುಂದರ ವರ್ಣಮಯ ದೃಶ್ಯ, ಇಂಪಾದ ಹಾಡುಗಳನ್ನು ಒಳಗೊಂಡ ನಿಮ್ಮ ನಮ್ಮ ಮೆಚ್ಚಿನ 'ಬಂಗಾರದ ಮನುಷ್ಯ'ನನ್ನು ಇಂದೇ ಭೇಟಿ ಮಾಡಿ. ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ', "ರಾಜೀವಪ್ಪನ ಪಾತ್ರ 'ಬಂಗಾರದ ಮನುಷ್ಯ' ಚಿತ್ರದಲ್ಲಿ ಮಾತ್ರವಲ್ಲ, ಪ್ರತಿ ಕುಟುಂಬದಲ್ಲೂ ಬೆಳಗಿದರೆ ನಾಡಿನಲ್ಲಿ ಬಡತನ ಎಂಬ ಪದ ಹುಡುಕಬೇಕು. ಅದು ಹೇಗೆ ತಿಳಿಯಲು ಇಂದೇ ಈ ಚಿತ್ರವನ್ನು ನೋಡಿ" ಇದರಲ್ಲಿ ಯಾವ ಗಿಮಿಕ್ಕಿದೆ ಹೇಳಿ? ಪೋಸ್ಟರ್‌ನಲ್ಲಿದ್ದ ಈ ಸಾಲುಗಳೇ ಚಿತ್ರದ ಅಭಿರುಚಿಯನ್ನು ತೋರಿಸುತ್ತದೆ. ಆ ಮೂಲಕ ಉತ್ತಮ ಪ್ರೇಕ್ಷಕನನ್ನೂ ಕಟ್ಟುತ್ತದೆ.
ಈಗಿನ ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕೇಳಿಬರುವ ಬಹುಮುಖ್ಯ ಪ್ರಶ್ನೆ, 'ನಿಮ್ಮ ಚಿತ್ರದ ಬಜೆಟ್ಟೆಷ್ಟು? ಮೊದಲನೇ ವಾರಕ್ಕೆ ಎಷ್ಟು ಗಳಿಸಿದ್ದೀರಿ?' ಎಂದು ಪ್ರಶ್ನಿಸಿದರೆ, 'ಸೂಪರ್ ಕಲೆಕ್ಷನ್ ಸಾರ್. ಬಿಕೆಟಿ ಅದ್ಭುತ ಗಳಿಕೆ. ಹಾಕಿದ್ದು ದುಡ್ಡಿಗೆ ಮೋಸ ಇಲ್ಲ ಬಿಡಿ ಸಾರ್‌' ಎನ್ನುತ್ತಾರೆ. ಪಾಪ ಹಾಗೆ ತಮ್ಮ ಚಿತ್ರದ ಕಲೆಕ್ಷನ್ ಬಗ್ಗೆ ಹೇಳಿಕೊಳ್ಳಲು ಕರೆಯುವ ಪತ್ರಿಕಾಗೋಷ್ಠಿಗಳನ್ನು ನಡೆಸುವ ಹೋಟೆಲ್‌ನವರ ಬಳಿ ಆಗಿರುವ ಬಿಲ್‌ಗೆ ಡಿಸ್ಕೌಂಟು ಕೇಳುತ್ತಿರುತ್ತಾರೆ. ಯಾರೂ ಧೈರ್ಯವಾಗಿ ತಮ್ಮ ಚಿತ್ರ ಇಂಥ ಪ್ರಾಂತ್ಯದಲ್ಲಿ ಇಷ್ಟು ಹಣ ಗಳಿಸಿದೆ ಅಂತ ಹೇಳಲ್ಲ. ಆದರೆ, 'ಹುಲಿಯ ಹಾಲಿನ ಮೇವು' ಚಿತ್ರದ ಪೋಸ್ಟರನ್ನು ನೋಡಿ... ಯಾವ ಊರು, ಎಷ್ಟು ಮಂದಿ ಪ್ರೇಕ್ಷಕರು, ಎಷ್ಟು ಕಲೆಕ್ಷನ್ ಆಗಿದೆ... ಹೀಗೆ ಮೂರು ಭಾಗಗಳಲ್ಲಿ ಚಿತ್ರದ ಗಳಿಕೆಯ ವಿವರಣೆಯಿದೆ. ಎಲ್‌ಕೆಜಿ ಮಗು ನೋಡಿದರೂ ಚಿತ್ರದ 'ಬಂಡವಾಳ' ಅರ್ಥವಾಗುತ್ತದೆ. 'ಕೇವಲ ಮೂರೇ ವಾರಗಳಲ್ಲಿ ನಮ್ಮ ಚಿತ್ರದ ಗಳಿಕೆ ಇದು. ಇದುವರೆಗಿನ ಎಲ್ಲ ದಾಖಲೆಗಳನ್ನು ಮೀರಿಸಿದೆ' ಎನ್ನುವ 'ಹುಲಿಯ ಹಾಲಿನ ಮೇವು' ಚಿತ್ರತಂಡ ಪೋಸ್ಟರ್ ಹಾಕಿದಂತೆ ಈಗಿನವರು ಇಂಥ ಧೈರ್ಯ ಮಾಡಲು ಸಾಧ್ಯವೇ?
ತಲೆಬುಡ ಇಲ್ಲದ ಶೀರ್ಷಿಕೆಗಳ ವಿನ್ಯಾಸ, ನಾಯಕಿಯರ ಬೆನ್ನು ಪ್ರರ್ಶನಗಳೇ ಈಗಿನ ಸಿನಿಮಾಗಳ ಪೋಸ್ಟರ್‌ಗಳ ಬಂಡವಾಳ. 'ದಂಡುಪಾಳ್ಯ' ಚಿತ್ರದಲ್ಲಿ ಪೂಜಾಗಾಂಧಿ ಬೆನ್ನು ತೋರಿಸಿರುವ ಚಿತ್ರಗಳು ಪೋಸ್ಟರ್‌ಗಳಲ್ಲಿ ಬಂದಿದ್ದೇ ತಡ ಆ ಚಿತ್ರದ ಬಗ್ಗೆ ಇನ್ನಿಲ್ಲದಂತೆ ಚರ್ಚೆಗಳಾದವು. ಈಗ 'ಅಭಿನೇತ್ರಿ' ಚಿತ್ರದ ಮೂಲಕ ಮತ್ತೆ ಅರೆಬೆತ್ತಲೆ ಪೋಸು ಕೊಟ್ಟಿರುವುದು ಬಿಸಿ ಬಿಸಿ ಸುದ್ದಿಯಾಗುತ್ತಿದೆ. ಹೀಗೆ ಗ್ರಾಮರ್‌ಗಿಂತ ಗ್ಲ್ಯಾಮರ್ ಅನ್ನೇ ಹೆಚ್ಚಾಗಿ ನಂಬಿಕೊಂಡಿರುವ ಈ ಕಾಲದ ಸಿನಿಮಾ ಪೋಸ್ಟರ್‌ಗಳ ಮುಂದೆ 'ಎಲ್ಲ ಕಾಲಕ್ಕೂ ಅತ್ಯಂತ ಶ್ರೇಷ್ಠ ಚಿತ್ರ' ಎನ್ನುವ ಘೋಷಣೆಗಳನ್ನು ಒಳಗೊಂಡ ಪೋಸ್ಟರ್‌ಗಳು ನಗೆಪಾಟಲಿಗೆ ಈಡಾಗಬಹುದೆನೋ?



-  ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.