ಭಯೋತ್ಪಾದನೆ ನೆರಳಲ್ಲಿ ಅರಳಿದ ಪಂಜಾಬಿ ಕತೆಗಳು

Updated on: 

ಭಾರತದ ಭೂಗೋಳದಲ್ಲಿ ಪಂಜಾಬಿನ ನೆಲೆ ವಿಶಿಷ್ಟವಾದದ್ದು. ಹೆಸರೇ ಸೂಚಿಸುವಂತೆ ಐದು ನದಿಗಳ ನಾಡು ಅದು. ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ದೇಶ ವಿಭಜನೆಯೊಂದಿಗೆ ಪಂಜಾಬ್ ಕೂಡ ವಿಭಜನೆಯಾಯಿತು. ಧರ್ಮದ ನೆಲೆಯಲ್ಲಿ ಪಂಜಾಬ್ ವಿಭಜನೆ ಆಗ ನಡೆದರೆ 1966ರಲ್ಲಿ ಭಾಷೆಯ ಆಧಾರದ ಮೇಲೆ ಪಂಜಾಬ್ ಒಡೆದು ಹರ್ಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಉದಯಿಸಿದವು. ಪಂಜಾಬ್ ಆರ್ಥಿಕವಾಗಿ ಶ್ರೀಮಂತ ರಾಜ್ಯ. ದೇಶದ ಗಡಿಯಲ್ಲಿರುವ ಕಾರಣ ಭೌಗೋಳಿಕವಾಗಿ ಅತಿ ಸೂಕ್ಷ್ಮ ಪ್ರದೇಶ. ಪಂಜಾಬಿಗಳು ಶ್ರಮಜೀವಿಗಳು. ಕೃಷಿ ಇರಲಿ ಕೈಗಾರಿಕೆ ಇರಲಿ ಅದರಲ್ಲಿ ಅವರ ಪರಿಶ್ರಮ ಕಾಣುತ್ತದೆ. ಇಂಥ ಪಂಜಾಬಿಗಳು 80-90ರ ದಶಕಗಳಲ್ಲಿ ಭಯೋತ್ಪಾದನೆಯ ಪೀಡೆಗೆ ಒಳಗಾದರು. ಕೆಲವು ಪಂಜಾಬಿಗಳು ಖಲಿಸ್ತಾನ್ ಚಳವಳಿಯ ದಾರಿಯಲ್ಲಿ ಸಾಗಿದ್ದರು. ಜನಸಾಮಾನ್ಯರ ಬದುಕು ಚಿಂದಿಯಾಗಿ ಹೋಯಿತು. ಅಲ್ಲಿ ಸ್ವಪ್ನವೆಂದರೆ ದುಸ್ವಪ್ನವೇ ಹೊರತು ಸುಂದರವಾದುದಾಗಿರಲಿಲ್ಲ. ಭಯೋತ್ಪಾದನೆಯೆಂಬ ಗೆದ್ದಲು ಸದೃಢವಾದ ಆರ್ಥಿಕತೆಯ ಮರವನ್ನು ದುರ್ಬಲಗೊಳಿಸಿತ್ತು. ಇಂಥ ಸನ್ನಿವೇಶದಲ್ಲಿ  ಮೋಹನ ಭಂಡಾರಿಯವರು ಸಾಹಿತ್ಯ ರಚನೆಯನ್ನು ಆರಂಭಿಸಿದರು. ಭಂಡಾರಿಯವರಿಗೆ ಚೆಕಾಫ್ ಮೆಚ್ಚಿನ ಲೇಖಕ. ಈ ಕಾರಣಕ್ಕಾಗಿಯೇ ಅವರನ್ನು ಪಂಜಾಬಿನ ಚೆಕಾಫ್ ಎಂದು ವಿಮರ್ಶಕರು ಕರೆಯುತ್ತಾರೆ.
ಪ್ರಸ್ತುತ 'ಹರಿಣಾಕ್ಷಿ ಮತ್ತು ಇತರ ಕಥೆಗಳು' ಕೃತಿಯಲ್ಲಿ ಭಂಡಾರಿಯವರ ಏಳು ಕತೆಗಳು ಇವೆ. ಸಮಕಾಲೀನ ಪಂಜಾಬಿನ ನೋವು, ಆತಂಕ, ಮೂರಾಬಟ್ಟೆಯಾದ ಅಲ್ಲಿಯ ಗ್ರಾಮೀಣ ಬದುಕು, ಸ್ನೇಹ ವಿಶ್ವಾಸಗಳ ಜಾಗದಲ್ಲಿ ವಿದ್ರೋಹ ಮತ್ತು ಅವಿಶ್ವಾಸಗಳು ನೆಲೆಯಾದದ್ದು ಎಲ್ಲವನ್ನೂ ಅವರು ತಮ್ಮ ಕ್ಯಾನ್ವಾಸಿನಲ್ಲಿ ತಂದಿದ್ದಾರೆ. ಅಮೂರ್ತವಾದ ಗುರಿಯ ಕಡೆ ಸಾಗಿದ ಭಯೋತ್ಪಾದಕರು ಮತ್ತು ಅದನ್ನು ಹತ್ತಿಕ್ಕುವ ಭರದಲ್ಲಿದ್ದ ಅಧಿಕಾರಶಾಹಿಯ ಮತ್ತೊಂದು ರೀತಿಯ ಭಯೋತ್ಪಾದನೆ ಇವುಗಳ ನಡುವೆ ಜನಸಾಮಾನ್ಯನ ಅಭಿವ್ಯಕ್ತಿಯಾಗಿ ಭಂಡಾರಿಯವರ ಕತೆಗಳು ನಿಲ್ಲುತ್ತವೆ.
ನಮ್ಮಲ್ಲಿಯ ದೇವದಾಸಿಯ ಪದ್ಧತಿಯಂತೆ ಅಲ್ಲಿಯೂ ದೇವರಿಗೆ ಹೆಣ್ಣುಗಳನ್ನು ಬಿಡುವ ಪದ್ಧತಿ ಇದೆ. ಅದು ಇಲ್ಲಿ 'ಪಾರಿವಾಳ' ಎಂಬ ಕತೆಯಾಗಿದೆ. ಶಕ್ತಿದೇವಿಯ ವಿವಾಹ ಆಕೆಯ ಸಣ್ಣ ಪ್ರಾಯದಲ್ಲಿಯೇ ದೇವಾಲಯದ ವಿಗ್ರಹದೊಂದಿಗೆ ನಡೆಯುತ್ತದೆ. ಪ್ರಾಯಕ್ಕೆ ಬಂದಾಗ ಅವಳ ಸಹಜವಾದ ಬಯಕೆಗಳು ಗರಿಗೆದರುತ್ತವೆ. ದೇಹ ಮತ್ತು ಆತ್ಮದ ದ್ವೈತ ಸೆಳೆತ ಅವಳಲ್ಲಿ ಅಧ್ಯಾತ್ಮವನ್ನು ಮೂಡಿಸುವುದೇ ಇಲ್ಲ. ಕತೆಯ ನಿರೂಪಕ ಕೊನೆಯಲ್ಲಿ ಪಾರಿವಾಳವನ್ನು ಕೊಲ್ಲುವುದು ಕ್ರೌರ್ಯದ ಪ್ರತೀಕವಾಗುತ್ತದೆ. ಈ ಕತೆಯಲ್ಲಿಯೂ ಭಯೋತ್ಪಾದಕರು ಮಾಡುವ ಹತ್ಯೆಯ ವಿವರಗಳಿವೆ.
'ಹರಿಣಾಕ್ಷಿ' ಕತೆಯಲ್ಲಿ ಸೇನೆಯ ಮೇಜರ್ ಒಬ್ಬರ ಸಾಕ್ಷಿಪ್ರಜ್ಞೆಯಲ್ಲಿ ದೃಶ್ಯಗಳ ಅನಾವರಣವಾಗುತ್ತದೆ. ಸೇನೆಯ ಮೇಜರ್ ಆದರೂ ಅಗತ್ಯವಿದ್ದಾಗ ನಾಗರಿಕ ಆಡಳಿತದ ನೆರವಿಗೆ ಧಾವಿಸುವ ಅವರು ಸಹೃದಯಿ. ಹೀಗಿದ್ದಾಗ ಒಂದು ದಿನ ಪಾನಗೋಷ್ಠಿಯೊಂದರಲ್ಲಿ ಮಹಿಳೆಯೊಂದಿಗೆ ಅವರ ಮುಖಾಮುಖಿಯಾಗುತ್ತದೆ. ಆಕೆ ತುಂಬ ಅತಂತ್ರ ಸ್ಥಿತಿಯಲ್ಲಿರುತ್ತಾಳೆ. ಅವಳ ಇಚ್ಛೆಯಂತೆ ನಡೆಯಲಾಗದೆ ಇದ್ದುದಕ್ಕೆ ಮೇಜರ್ ಕೊನೆಯ ವರೆಗೂ ವಿಷಾದದಿಂದ ನರಳುವಂತಾಗುತ್ತದೆ. ಇಲ್ಲಿ ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸಲಾಗದಂಥ ಸಂದಿಗ್ಧ ಸ್ಥಿತಿ. ಇಂಥದ್ದೇ ಸನ್ನಿವೇಶ ನಿಮ್ಮ ಬದುಕಿನಲ್ಲಿಯೂ ಘಟಿಸಿದ್ದರೆ ನೀವೇನು ಮಾಡುತ್ತಿದ್ದೀರಿ ಎಂಬ ಆತ್ಮ ನಿರೀಕ್ಷಣೆಯ ಪ್ರಶ್ನೆಯನ್ನು ಓದುಗರಿಗೆ ಎಸೆಯುವಂತಿದೆ ಕತೆ. ಕತೆಯ ಹೈಲೈಟ್ಸ್ ಅದರ ಭಾಷೆ. ಶೈಲಿಯ ಲವಲವಿಕೆ. ಇದು ಹಿರಿಯ ಬರೆಹಗಾರ ಜಿ.ಎನ್. ರಂಗನಾಥರಾವ್ ಅವರ ಅನುವಾದದಲ್ಲಿಯೂ ಪ್ರತಿಫಲಿಸಿದೆ.
'ಭಾಗಸ್ತಿಕೆ' ಕತೆಯಲ್ಲಿ ಸತ್ಯಪ್ರಕಾಶ ಮತ್ತು ಬ್ರಹ್ಮಪ್ರಕಾಶ ಎಂಬ ಇಬ್ಬರು ಸಹೋದರರು ಮುಖ್ಯ ಪಾತ್ರದಲ್ಲಿದ್ದಾರೆ. ಒಬ್ಬರು ಹಳ್ಳಿಯಲ್ಲಿ ಉಳಿದರೆ ಇನ್ನೊಬ್ಬರು ನಗರ ಸೇರಿಕೊಂಡಿದ್ದಾರೆ. ಭಯೋತ್ಪಾದನೆಯು ಅವರಿಬ್ಬರನ್ನೂ ಹೇಗೆ ಹತ್ತಿರ ತರುತ್ತದೆ ಎಂಬುದು ಕತೆಯ ವಿಶೇಷವಾಗಿದೆ. ಹಳ್ಳಿಯಲ್ಲಿದ್ದ ಸತ್ಯಪ್ರಕಾಶನಿಗೆ ಭಯೋತ್ಪಾದನೆ ಒಂದು ಕೆಟ್ಟ ಸ್ವಪ್ನ. ಆದರೆ ವಕೀಲನಾಗಿ ಪಟ್ಟಣ ಸೇರಿದೆ ಬ್ರಹ್ಮಪ್ರಕಾಶನಿಗೆ ಭಯೋತ್ಪಾದನೆ ತನ್ನ ವೃತ್ತಿಯನ್ನು ಮೇಲೆತ್ತುವುದಕ್ಕೆ ಒಂದು ಸಾಧನವಾಗಿ ಕಾಣುತ್ತದೆ. ಯಾವ ಸನ್ನಿವೇಶ ಅವರನ್ನು ಹತ್ತಿರ ತಂದಿತು ಎಂಬುದನ್ನು ಅರಿಯಲು ಕತೆಯನ್ನೇ ಓದಬೇಕು.
'ಪ್ರಿಯೆ, ಬಾಚಿಕೋ ನಿನ್ನ ಸಿರಿಮುಡಿಯ' ಕತೆಯಲ್ಲಿ ಭಯೋತ್ಪಾದಕರ ಭಯದಲ್ಲಿಯೂ ಮಾನವೀಯತೆ ಸಾಯದಿರುವುದನ್ನು ಉದಾಹರಣೆಯಾಗಿ ನೀಡುತ್ತದೆ. 'ಬಿರುಕು' ಕತೆಯು ವಿಭಜನೆಯ ನೋವನ್ನು ಹೇಳುತ್ತದೆ. ಮೊದಲು ದೇಶ ವಿಭಜನೆಯಿಂದಾದ ನೋವು. ಎರಡನೆಯದು 1984ರ ಇಂದಿರಾ ಗಾಂಧಿ ಹತ್ಯೆ ನಂತರ ನಡೆದ ಸಿಖ್ ಜನರ ಹತ್ಯೆಗಳಿಂದಾದದ್ದು. ಕತೆಯನ್ನು ಓದಲು ಆರಂಭಿಸಿದರೆ ನಿಮ್ಮನ್ನು ಆರ್ದ್ರಗೊಳಿಸದೇ ಇರದು.
ಈ ಎಲ್ಲ ಕತೆಗಳು ಭಯೋತ್ಪಾದನೆಯ ನಿರರ್ಥಕತೆ ಮತ್ತು ಜೀವನ ಪ್ರೀತಿಯನ್ನು ಹೇಳುತ್ತದೆ. ಸಮಕಾಲೀನ ಪಂಜಾಬಿಗಳ ಮಾನಸಿಕ ತುಮುಲವನ್ನು ಅದಕ್ಕೆ ಅನುಗುಣವಾದ ಭಾಷೆಯಲ್ಲಿ ಭಂಡಾರಿಯವರು ಕಟ್ಟಿಕೊಟ್ಟಿದ್ದಾರೆ. ಜಿ.ಎನ್.ರಂಗನಾಥರಾವ್ ಅವರ ಅನುವಾದವು ಸೊಗಸಾಗಿದೆ.
ಪ್ರ: ರಾಸಾಹಿತ್ಯ ಅಕಾಡೆಮಿ, ನವದೆಹಲಿ, ಪುಟಗಳು 167, ಬೆಲೆ ರು. 100 <

ಬುರ್ರಕಥಾ ಜಯಮ್ಮ
ಜನಪದ ಕಲಾಪ್ರಕಾರಗಳಲ್ಲಿ ಒಂದಾದ 'ಬುರ್ರಕಥಾ'ದ ಮೂಲ ತೆಲುಗಿನಲ್ಲಿದೆ. ಕರ್ನಾಟಕದ ಬಯಲಾಟ, ಯಕ್ಷಗಾನಗಳ ರೀತಿಯಲ್ಲಿ ಇದು ಆಂಧ್ರದಲ್ಲಿ ಜನಪ್ರಿಯವಾಗಿದೆ. ಆಂಧ್ರ ಗಡಿಭಾಗದ ಕನ್ನಡ ಜಿಲ್ಲೆಗಳಲ್ಲೂ ಇದು ಪ್ರಚಾರದಲ್ಲಿದೆ. ಬುರ್ರಕಥೆಯ ಜಯಮ್ಮ ಸೋಲಿಗರ ಮಹಿಳೆ. ಇವರ ಮೂಲ ಕೂಡ ಆಂಧ್ರವೇ. ಈ ಕಥೆಯ ಹಾಡುಗಳನ್ನು ಹಾಡುವುದಕ್ಕೆ ಬಳಸುವ ಗುಮ್ಮಟೆಗಳನ್ನು ಆಂಧ್ರದಲ್ಲಿ ಬುರ್ರಲು ಎಂದು ಕರೆಯುತ್ತಾರೆ. ಅದೇ ಕಾರಣದಿಂದ ಇದು ಬುರ್ರಕಥೆಯಾಗಿದೆ. ಜಾಗತೀಕರಣದ ದಟ್ಟ ಪ್ರಭಾವದ ನಡುವೆಯೂ ಇಂಥ ಒಂದು ಕಲಾಪ್ರಕಾರ ಉಳಿದು ಬಂದಿರುವುದು ಜನಪದರ ಕಲೆಯ ಪ್ರೀತಿಯನ್ನು ತೋರಿಸುತ್ತದೆ. ಬುರ್ರಕಥೆಯಲ್ಲಿ ಸಮಕಾಲೀನ ವಸ್ತು ವಿಷಯಗಳೂ ಸೇರಿ ಅದನ್ನು ಸಮಾಜ ಸುಧಾರಣೆಗೂ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ಕಲೆಯಲ್ಲಿ ಅಪಾರವಾದ ಸಾಧನೆ ಮಾಡಿದ ಜಯಮ್ಮನನ್ನು ಹಾಗೂ ಕಲಾ ಪ್ರಕಾರವನ್ನು ಚಿಕ್ಕದಾಗಿ ಚೊಕ್ಕದಾಗಿ ಡಾ.ಕೆ. ಪ್ರೇಮಕುಮಾರ ಕೃತಿಯಲ್ಲಿ ಸಾಕಾರಗೊಳಿಸಿದ್ದಾರೆ.
ಪ್ರ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಪುಟಗಳು: 70, ಬೆಲೆ: 40 ರು.
ಶಿಶಿಲದ ಒಳಗಣ್ಣು
ಡಾ. ಪ್ರಭಾಕರ ಶಿಶಿಲ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಇದೀಗ ಅವರು ತಮ್ಮ ಅರವತ್ತು ಭಾಷಣಗಳ ಸಂಕಲನವನ್ನು 'ಒಳಗಣ್ಣು' ಹೆಸರಿನಲ್ಲಿ ಕೃತಿ ರೂಪದಲ್ಲಿ ತಂದಿದ್ದಾರೆ. ಇಲ್ಲಿಯ ಬರೆಹಗಳನ್ನು ಅವರು ಸಾಧನೆ, ಶೋಧನೆ, ನಿವೇದನೆ, ಸಂವೇದನೆ, ಅಭಿವಂದನೆ ಮತ್ತು ಪ್ರತಿಪಾದನೆ ಎಂದು ಆರು ವಿಭಾಗ ಮಾಡಿದ್ದಾರೆ. ಆರಂಭದಲ್ಲಿ ವೇದಿಕೆ ಏರುವುದಕ್ಕೇ ಅಂಜುತ್ತಿದ್ದ ಪ್ರಭಾಕರ ಅವರು ಉತ್ತಮ ವಾಗ್ಮಿಯಾಗಿ ಬೆಳೆದ ಪರಿಯನ್ನು ಇಲ್ಲಿ ನಾವು ನೋಡಬಹುದು. ಜೀವನಾನುಭವ, ವ್ಯಾಪಕ ಅಧ್ಯಯನವನ್ನು ಇಲ್ಲಿಯ ಬರೆಹಗಳಲ್ಲಿ ನಾವು ಕಾಣಬಹುದು. ಭಾಷಣಕಾರನಿಗೆ ನಿಯಮಿತ ವಿಷಯವಿರುತ್ತದೆ ಮತ್ತು ಸಾರ್ವಜನಿಕ ಬಾಧ್ಯತೆಯೂ ಇರುತ್ತದೆ ಎಂಬ ಎಚ್ಚರಿಕೆಯಿಂದ ಪ್ರಭಾಕರ ಅವರು ಭಾಷಣ ಮಾಡಿರುವುದರಿಂದ ಅವು ಓದುವುದಕ್ಕೂ ಇಷ್ಟವಾಗುತ್ತವೆ.
ಪ್ರ: ರಾಜ್ ಪ್ರಕಾಶನ, ಮೈಸೂರು, ಪುಟಗಳು 392, ಬೆಲೆ ರು. 225
ಕಾವ್ಯದೀಪ್ತಿ
ಮಾರ್ಕಂಡಪುರಂ ಶ್ರೀನಿವಾಸ ಅವರು ಈಗಾಗಲೆ ಹಲವು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದೀಗ ಅವರ ಹನಿಗವನಗಳ ಸಂಕಲನ 'ಕಾವ್ಯದೀಪ್ತಿ' ಬಂದಿದೆ. ಇಲ್ಲಿಯ ಪುಟ್ಟ ಕವಿತೆಗಳಲ್ಲಿ ಶ್ರೀನಿವಾಸ ಅವರು ಸಮಾಜದ ವಿಡಂಬನೆ ಮಾಡಿದ್ದಾರೆ, ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ, ಸಲಹೆಗಳನ್ನು ನೀಡಿದ್ದಾರೆ, ಕುತೂಹಲದ ಬೆರಗನ್ನು ವ್ಯಕ್ತಪಡಿಸಿದ್ದಾರೆ, ಸುಮ್ಮನೆ ಪ್ರಶ್ನೆಗಳನ್ನು ಕೇಳಿದ್ದಾರೆ, ಮಿತ್ರ ಸಮ್ಮಿತ, ಕಾಂತಾ ಸಮ್ಮಿತ, ಪ್ರಭು ಸಮ್ಮಿತದಂಥ ಉಕ್ತಿಗಳಿವೆ. ಇಲ್ಲಿಯ 'ನರ' ಎಂಬ ಹನಿ ಹೇಳುವುದು ಹೇಗೆ- "ಮನುಷ್ಯ ತಾನೊಬ್ಬನೇ/ ಆಗಲಾರ ಮನುಷ್ಯ!/ ಎಲ್ಲರೊಂದಿಗೆ/ ತಾನೂ ಇರದ ಹೊರತು/" ಅದೇ ರೀತಿ 'ದೂರವಲ್ಲ' ಎಂಬ ಹನಿಯಲ್ಲಿ- "ನನಗೆ ನಾನು ದೂರವಲ್ಲ/ ನೀನು ನಾನು ದೂರವು/ ನೀನು ನಾನು ದೂರವಲ್ಲ/ ನೀನು-ನಾನು, ನಾವು ಎನ್ನಲು/" ಇಂಥ ಸಾಮತಿಗಳಂಥ ಸಾಲುಗಳು ಕೃತಿಯನ್ನು ಓದಲು ಪ್ರೇರಿಸುತ್ತವೆ.
ಪ್ರ: ಸಾಹಿತ್ಯ ವಾಹಿನಿ, ಬೆಂಗಳೂರು, ಪುಟಗಳು 112, ಬೆಲೆ ರು. 90


ಡಾ. ವಾಸುದೇವ ಶೆಟ್ಟಿ
jalavalli@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com