ಖುಷಿ

ಇವನೊಬ್ಬ ಟ್ರೇಡ್ ಮಾರ್ಕ್!

ವಾಟ್ ಆ್ಯನ್ ಐಡಿಯಾ ಮಾರ್ಕ್‌ಜೀ! 100 ಒತ್ತಿದರೆ ಪೊಲೀಸರು ಬರುತ್ತಾರೆ; 101 ಒತ್ತಿದರೆ ಅಗ್ನಿಶಾಮಕ ದಳ ....

ಇವನೊಬ್ಬ ಟ್ರೇಡ್ ಮಾರ್ಕ್!
Published On :

ವಾಟ್ ಆ್ಯನ್ ಐಡಿಯಾ ಮಾರ್ಕ್‌ಜೀ!
100 ಒತ್ತಿದರೆ ಪೊಲೀಸರು ಬರುತ್ತಾರೆ; 101 ಒತ್ತಿದರೆ ಅಗ್ನಿಶಾಮಕ ದಳ ಗಂಟೆ ಬಾರಿಸುತ್ತ ಬರುತ್ತೆ; 108ಕ್ಕೆ ಕರೆಮಾಡಿದರೆ ಆ್ಯಂಬುಲೆನ್ಸ್ ಮನೆಯೆದುರು ನಿಲ್ಲುತ್ತೆ. ಹಾಗಿದ್ದರೆ ಇಂಟರ್ನೆಟ್ ಬೇಕೆಂದರೆ ಏನು ಮಾಡುವುದು!?
ಇದೇ ತುರ್ತು ಸೇವೆಯ ಬಗ್ಗೆ ಈಗ ಜಗತ್ತಿನೆಲ್ಲೆಡೆ ಭರವಸೆಗಳು ಪ್ರವಾಹವಾಗುತ್ತಿವೆ. ಇದರಿಂದ ಟೆಲಿಕಾಂ ಸಂಸ್ಥೆಗಳು, ಗೂಗಲ್ ಅಕ್ಷರಶಃ ಅದುರಿಹೋಗಿದೆ. ಆನ್‌ಲೈನ್ ಯುಗದ ಮತ್ತೊಂದು ಮಜಲನ್ನು ಮಾರ್ಕ್ ಝುಕರ್‌ಬರ್ಗ್ ತೆರೆದಿಡುತ್ತಿರುವಂತೆ ಬಿಲಿಯನ್‌ಗಟ್ಟಲೇ ಇಂಟರ್ನೆಟ್ ಬಳಕೆದಾರರು ನಿಬ್ಬೆರಗಾಗಿ ಖುಷಿ ಪಟ್ಟಿದ್ದಾರೆ.
ವಾಟ್ಸ್‌ಆ್ಯಪ್ ಅನ್ನು 19 ಬಿಲಿಯನ್ ಡಾಲರ್‌ಗೆ ಖರೀದಿಸಿ ಸದ್ದುಮಾಡಿದ ಫೇಸ್‌ಬುಕ್ ಮಾಲೀಕ ಮಾರ್ಕ್ ಝುಕರ್‌ಬರ್ಗ್ ಈಗ ಇಂಟರ್ನೆಟ್.ಆರ್ಗ್ ಮೂಲಕ ಬಿಲಿಯನ್‌ಗಟ್ಟಲೇ ಫೇಸ್‌ಬುಕ್, ವಾಟ್ಸ್‌ಆ್ಯಪ್ ಬಳಕೆದಾರರಿಗೆ ಉಚಿತ ಇಂಟರ್ನೆಟ್ ಕೊಡುವ ಕನಸಿಗೆ ಕೈಹಾಕಿದ್ದಾರೆ. ಆ ಕ್ಷಣಕ್ಕೆ ಮಾರ್ಕ್ ಮಾತುಗಳು ನಗೆ ಮೂಡಿಸಿದರೂ ವಾಟ್ಸ್‌ಆ್ಯಪ್ ಅನ್ನು ರು. 12 ಲಕ್ಷ ಕೋಟಿಗೆ ಖರೀದಿಸಿದವನು ಬಾಲಿಶ ಮಾತನಾಡಲಾರ ಎಂಬುದಂತೂ ಗೊತ್ತಿರಲಿ. ತಲೆಯಲ್ಲಿ ಬ್ರಿಲಿಯಂಟ್ ಬ್ಯುಸಿನೆಸ್ ಟ್ಯಾಕ್ಟಿಕ್ಸ್ ಇಟ್ಟುಕೊಂಡೇ ಇನ್ನೆರಡು ವರ್ಷದಲ್ಲಿ 5 ಬಿಲಿಯನ್ ಜನತೆಗೆ ಉಚಿತ ಇಂಟರ್ನೆಟ್ ನೀಡುತ್ತೇನೆ ಎಂದಾತ ಹೇಳಿದ್ದು. ಅಷ್ಟಕ್ಕೂ ಈಗಾಗಲೇ ನೋಕಿಯಾ ಸಂಸ್ಥೆಯ ತವರೂರು ಫಿಲಿಪ್ಪೀನ್ಸ್‌ನಲ್ಲಿ ಫೇಸ್‌ಬುಕ್ ಬಳಕೆದಾರರಿಗೆ ಇಂಟರ್ನೆಟ್ ಫ್ರೀ ಇದೆ.
ಉಚಿತ ಭಾಗ್ಯದಿಂದ ಲಾಭವೇನು?
ಎರಡು ವಾರದ ಹಿಂದೆ ಅಮೆರಿಕದ ಮೂವರು ಉದ್ಯಮಿಗಳು ಜಗತ್ತಿಗೆ ಉಚಿತ ವೈ- ಫೈ ನೀಡುತ್ತೇವೆ ಎಂದಿದ್ದರು. ಆಗಲೂ ಇದರ ಬಗ್ಗೆ ಸಾಕಷ್ಟು ಸಂಶಯ ಹಾಗೂ ಉಡಾಫೆಯಿತ್ತು. ಆದರೆ ಮಾರ್ಕ್ ಬಾಯಿಂದ ಈ ಉಚಿತ ಮಂತ್ರ ಹೊರಬಂದಾಗ ಒಂದು ಕ್ಷಣಕ್ಕೆ ಆಲೋಚಿಸಲೇಬೇಕು ಎಂದೆನಿಸಿತು.
ಇನ್ನೆರಡು ವರ್ಷದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 300 ಕೋಟಿ ಹಾಗೂ ವಾಟ್ಸ್‌ಆ್ಯಪ್ ಗ್ರಾಹಕರ ಸಂಖ್ಯೆ 2 ಶತಕೋಟಿ ದಾಟುತ್ತದಂತೆ. ಒಟ್ಟು 500 ಕೋಟಿ ಮ್ಯಾಜಿಕ್ ಸಂಖ್ಯೆಗಳನ್ನು ಹೊಂದಿರುವ ಮಾರ್ಕ್, ಇದನ್ನೊಂದು ಬೃಹತ್ ಜಾಹೀರಾತು ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಾನೆ. ಇದೇ 500 ಕೋಟಿ ಜನರ ಮೂಲಕ ಜಾಹೀರಾತು ಮಾರುಕಟ್ಟೆಯ ಮೇಲೆ ಕಣ್ಣಿರಿಸಿಕೊಂಡೇ ಆತ ಉಚಿತ ಭಾಗ್ಯದ ಬಗ್ಗೆ ಮಾತನಾಡಿದ್ದು!
ಈಗ ತುರ್ತಾಗಿ ನೆಟ್ ಬೇಕೆಂದರೆ ಮೊಬೈಲ್‌ನಲ್ಲಿ ಒಂದು ಸೂಚಿತ ಸಂಖ್ಯೆಯನ್ನು ಒತ್ತಿದರೆ ಫೇಸ್‌ಬುಕ್ ಅಥವಾ ವಾಟ್ಯ್‌ಆ್ಯಪ್ ಗೇಟ್‌ವೇ ಮೂಲಕ ಉಚಿತವಾಗಿ ಇಂಟರ್ನೆಟ್ ಬಳಸಬಹುದು. ಇದರಲ್ಲಿ ಟೆಕ್ಸ್ಟಿಂಗ್, ಸೀಮಿತ ಸರ್ಚ್ ಎಂಜಿನ್, ಬ್ರೌಸಿಂಗ್, ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನ ಸಾಮಾನ್ಯ ಬಳಕೆಯನ್ನು ಗ್ರಾಹಕರು ಮಾಡಬಹುದು.
ಇದರ ಪ್ರಾರಂಭಿಕ ಹಂತವಾಗಿ ಎಲ್ಲ ಮೊಬೈಲ್ ಉತ್ಪಾದಕ ಕಂಪನಿಗಳ ಜತೆ ಫೇಸ್‌ಬುಕ್ ಮಾತುಕತೆ ಆರಂಭಿಸಿದೆ. ಅಲ್ಲದೆ, ವಿಶ್ವದಲ್ಲಿರುವ ಪ್ರಮುಖ ವೈರ್‌ಲೆಸ್ ಕಂಪನಿಗಳ ಜತೆಯೂ ಫೇಸ್‌ಬುಕ್ ಚರ್ಚೆ ಆರಂಭಿಸಿದೆ. ಈ ಮೂಲಕ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ಗಳ ಟೆಕ್ಸ್ಟಿಂಗ್, ಸರ್ಚ್ ಎಂಜಿನ್ ಹಾಗೂ ಬ್ರೌಸಿಂಗ್‌ಗೆ ಈ ಉಚಿತ ಇಂಟರ್ನೆಟ್ ದೊರೆಯುತ್ತದೆ. ಇದಕ್ಕೂ ಹೆಚ್ಚಿನ ಸೌಲಭ್ಯಗಳಿಗೆ ವಿಡಿಯೋ ಬಫರಿಂಗ್ ಅಥವಾ ಇನ್ನಿತರ ಸೇವೆಗಳಿಗೆ ಟೆಲಿಕಾಂ ನೆಟ್‌ವರ್ಕ್‌ಗಳಿಗೆ ಹಣ ಸಂದಾಯ ಮಾಡಲೇಬೇಕು. ಆದರೆ ಈ ಉಚಿತ ಸೇವೆಗೆ ಗ್ರಾಹಕರ ಬದಲು ಫೇಸ್‌ಬುಕ್ ಒಡೆಯನೇ ಟೆಲಿಕಾಂ ಸರ್ವೀಸ್‌ಗಳಿಗೆ ಹಣ ಸಂದಾಯ ಮಾಡುತ್ತಾನೆ. ಅದಕ್ಕೆ ಬದಲಾಗಿ 500 ಕೋಟಿ ಗ್ರಾಹಕರ ಪುಟಗಳಲ್ಲಿ, ಸರ್ಚ್ ಎಂಜಿನ್‌ಗಳಲ್ಲಿ ಕೋಟ್ಯಂತರ ರುಪಾಯಿಗಳ ಜಾಹೀರಾತು ಆದಾಯವನ್ನು ಈತ ಗಳಿಸುತ್ತಾನೆ.
ಆದರೆ, ಈ ಸುದ್ದಿಯಿಂದ ಗೂಗಲ್ ಕೂಡ ಸೆಟೆದುಕೊಳ್ಳಲು ಕಾರಣವಿದೆ. ಮಾರ್ಕ್ ಹೇಳಿರುವ ಸರ್ಚ್ ಎಂಜಿನ್ ಗೂಗಲ್ ಅಥವಾ ಬಿಂಗ್ ಅಲ್ಲ. ಫೇಸ್‌ಬುಕ್‌ನಿಂದಲೇ ಮತ್ತೊಂದು ಸರ್ಚ್ ಎಂಜಿನ್ ಬರುವ ಸೂಚನೆಯನ್ನು ಮಾರ್ಕ್ ನೀಡಿದ್ದಾನೆ. ಈ ಮೂಲಕ ಆನ್‌ಲೈನ್ ಜಗತ್ತಿನ ಸಾರ್ವಭೌಮನಾಗುವುದು ಮಾರ್ಕ್‌ನ ದೊಡ್ಡ ಕನಸು. ಒಂದೇ ಚಿಂತನೆಯಿಂದ 500 ಕೋಟಿ ಗ್ರಾಹಕರನ್ನು ತಲುಪಬಹುದು ಹಾಗೂ ಇದರಲ್ಲಿ ಶೇ.60ಕ್ಕೂ ಅಧಿಕ ಜನ ನಿತ್ಯವೂ ಪ್ರೊಫೈಲ್‌ಗಳನ್ನು ಆ್ಯಕ್ಟಿವ್ ಇರುವವರಾಗಿದ್ದಾರೆ. ಜಗತ್ತಿನ ಇನ್ನ್ಯಾವುದೇ ಮಾಧ್ಯಮದಲ್ಲೂ ಈ ಪ್ರಮಾಣದ ಜನಸ್ತೋಮ ಸಾಧ್ಯವಾಗಿಲ್ಲ.
ಡಾಟಾ ಸಂಗ್ರಹವೇ ದೊಡ್ಡ ಬ್ಯುಸಿನೆಸ್
ಜಗತ್ತಿಗೆ ಉಚಿತ ವೈ-ಫೈ, ಈಗ ಉಚಿತ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ನ ಬಗ್ಗೆ ಮಾತಾಡುತ್ತಿರುವುದರ ಹಿಂದೆ ಜಾಹೀರಾತು ಮಾರುಕಟ್ಟೆ ಹೊರತಾಗಿ ಮತ್ತೊಂದು ಅದೃಶ್ಯ ಪ್ರಪಂಚವಿದೆ. ಪ್ರಸ್ತುತ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್ ಬಳಿಯೇ 180 ಕೋಟಿ ಜನರ ಡಾಟಾವಿದೆ. ಉಚಿತ ಇಂಟರ್ನೆಟ್ ನೀಡುವುದರಿಂದ ಜನರು ಇವೆರಡು ಸಾಮಾಜಿಕ ತಾಣ ಬಳಸಲು ಟೆಂಪ್ಟ್ ಆಗುತ್ತಾರೆ. ಹಾಗೆಯೇ ಬಳಕೆದಾರರ ಸಂಖ್ಯೆಯೂ ದ್ವಿಗುಣಗೊಳ್ಳುತ್ತದೆ. ಇದರಿಂದ ನೂರಾರು ಕೋಟಿ ಜನರ ಡಾಟಾವನ್ನು ಸಂಗ್ರಹಿಸಲಾಗುತ್ತದೆ. ಈ ಡಾಟಾಗಳನ್ನು ರಹಸ್ಯವಾಗಿ ಉದ್ದಿಮೆಗಳ ಜತೆ ಮಾರಿಕೊಳ್ಳಲಾಗುತ್ತದೆ. ಇದರಿಂದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂಥ ಸಂಸ್ಥೆಗಳು ದುಡ್ಡು ಮಾಡುತ್ತವೆ. ಇಂಥದ್ದೇ ಲೆಕ್ಕಾಚಾರದಿಂದ ಉಚಿತ ವೈ-ಫೈ ಮಾತುಗಳು ಹೊರಬಂದಿದ್ದು. ಅವರ ಸರ್ವರ್‌ಗಳಲ್ಲಿ ಜಗತ್ತಿನ ಅಂತರ್ಜಾಲ ಬಳಕೆದಾರರ ಹಣೆಬರಹವಿರುತ್ತದೆ.
ಒಟ್ಟಿನಲ್ಲಿ ಮಾರ್ಕ್‌ನ ಮಹತ್ವಾಕಾಂಕ್ಷೆಯಲ್ಲಿ ಆನ್‌ಲೈನ್ ಕಿಂಗ್ ಆಗುವ ಹಂಬಲಿದೆ. ವಾಟ್ಸ್‌ಆ್ಯಪ್‌ಗೆ ಸುರಿದಿರುವ ಲಕ್ಷಾಂತರ ಕೋಟಿ ಹಣವನ್ನು ಬಾಚಿಕೊಳ್ಳುವ ತವಕವಿದೆ. ಈ ಉಚಿತ ಭಾಗ್ಯದ ಆಸೆಯನ್ನು ಜನರಿಗೆ ತೋರಿಸಿ ಅಂತರ್ಜಾಲ ಜಗತ್ತಿಗೆ ಕೋಟ್ಯಂತರ ಯುವಜನತೆಯನ್ನು ಎಳೆತರುವ ಉತ್ಸಾಹವಿದೆ. ಈ ಹಂಬಲ, ತವಕ ಹಾಗೂ ಉತ್ಸಾಹ ನಮ್ಮ ಕಣ್ಣಿಗೆ ಸೇವೆಯಾಗಿ ಕಾಣುತ್ತಿದೆ. ಆದರೆ, ಇದು ಆತನ ಹುನ್ನಾರವಷ್ಟೇ!


-  ರಾಜೀವ ಹೆಗಡೆ
meet.hegde@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.