ಖುಷಿ

ಕೆಲವು ಪುಟಗಳು

ಕಲಕತ್ತೆಯ ಬಂಗಾಲಿ ಪತ್ರಿಕೆ 'ಪ್ರವಾಸಿ' ಹಾಗೂ ಇಂಗ್ಲಿಷ್ ಪತ್ರಿಕೆ 'ಮಾಡರ್ನ್ ರಿವ್ಯೂ' ಅವೆರಡೂ ಪತ್ರಿಕೆಗಳ ಸಂಪಾದಕರಾದ ರಮಾನಂದ...

Published On :

ಕಲಕತ್ತೆಯ ಬಂಗಾಲಿ ಪತ್ರಿಕೆ 'ಪ್ರವಾಸಿ' ಹಾಗೂ ಇಂಗ್ಲಿಷ್ ಪತ್ರಿಕೆ 'ಮಾಡರ್ನ್ ರಿವ್ಯೂ' ಅವೆರಡೂ ಪತ್ರಿಕೆಗಳ ಸಂಪಾದಕರಾದ ರಮಾನಂದ ಚಟರ್ಜಿ ಅವರ ಹೆಸರು ಕೇಳಿರುವಿರಷ್ಟೇ? ಅವರೊಮ್ಮೆ ಕಾಶಿಗೆ ಹೋದಾಗ ಗಂಗಾ ನದಿಯಲ್ಲಿ ಸ್ನಾನಕ್ಕಿಳಿದರು. ಇದ್ದಕಿದ್ದ ಹಾಗೆ ಅವರು ಕಾಲುಜಾರಿ ಮುಳುಗತೊಡಗಿದರು. ಅದನ್ನು ಕಂಡು ಪರಿಸರದಲ್ಲಿದ್ದವರೆಲ್ಲ ಸಾಕಷ್ಟು ಬೊಬ್ಬಾಟ ಮಾಡಿದರು. ನೀರಲ್ಲಿ ನುಸುಳಿ ಅವರನ್ನುಳಿಸುವ ಧೈರ್ಯ ಯಾರಿಗೂ ಬರಲಿಲ್ಲ. ಅಷ್ಟರಲ್ಲಿ ಒಬ್ಬ ಸಾಹಸಿಯಾದ ತರುಣನು ಜೀವದ ಹಂಗು ತೊರೆದು, ಗಂಗೆಯಲ್ಲಿ ಧುಮುಕಿ ಆ ವೃದ್ಧ ಮಹನೀಯರನ್ನು ಮೇಲಕ್ಕೆತ್ತಿದನು.
ಚಟರ್ಜಿಯವರು ತಮ್ಮ ಜೀವ ಉಳಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತ ಹೀಗೆ ನುಡಿದರು- 'ಹುಡುಗಾ, ನಿನಗೇನು ಬೇಕು? ಸಂಕೋಚವಿಲ್ಲದೆ ಹೇಳು, ಕೊಟ್ಟು ಬಿಡುತ್ತೇನೆ.'
'ಏನೂ ಬೇಡ ರಾಯರೆ, ನಿಮ್ಮನ್ನುಳಿಸುವುದು ನನ್ನ ಕರ್ತವ್ಯವೇ ಆಗಿತ್ತು. ಅದಕ್ಕೇಕೆ ಫಲ?' ಎಂದು ಮರು ನುಡಿದನು. ಆ ತರುಣ ಯಾವ ಪ್ರತಿಫಲ ತೆಗೆದುಕೊಳ್ಳುವು ದಕ್ಕೂ ಒಪ್ಪಲಿಲ್ಲ.
'ಕಲಕತ್ತೆಗೆ ಬಂದಾಗ ಭೆಟ್ಟಿ ಆಗು, ಸಹಾಯ ಮಾಡುತ್ತೇನೆ' ಎಂದು ಹೇಳಿ ಚಟರ್ಜಿಯವರು, ತಮ್ಮ ಹೆಸರು ವಿಳಾಸಗಳ ಕಾರ್ಡು ಕೊಟ್ಟು ಹೊರಟು ಹೋದರು.
ಮುಂದೆ ಹಲವಾರು ವರ್ಷಗಳ ತರುವಾಯ, ಆ ಯುವಕನು ಕಲಕತ್ತೆಗೆ ಹೋದಾಗ ಆ ಮಹನೀಯರನ್ನು ಕಂಡನು. ಆವಾಗ ಚಟರ್ಜಿಯವರು ವಾತ್ಸಲ್ಯಪೂರ್ಣ ಧ್ವನಿಯಿಂದ ಕೇಳಿದರು.-'ಹೇಳು ತಮ್ಮಾ, ನಿನಗೇನು ಬೇಕು?'
ನಾನು ಕೆಲವು ಕವಿತೆಗಳನ್ನು ಬರೆದಿದ್ದೇನೆ. ದಯವಿಟ್ಟು 'ಪ್ರವಾಸಿ'ಯಲ್ಲಿ ಪ್ರಕಟಿಸಬೇಕು ಎನ್ನುತ್ತ ಕೆಲವು ಹಾಳೆಗಳನ್ನು ಅವರ ಕೈಗಿತ್ತನು. ಸಂಪಾದಕರು ಒಂದು ಸಾಲು ಸಹ ಬಿಡದೆ ಆತನ ಬರಹವನ್ನೆಲ್ಲ ಓದಿ 'ತಮ್ಮಾ, ತಪ್ಪು ತಿಳಕೊಳ್ಳಬೇಡ, ನೋಡು-ಇವುಗಳನ್ನು ಪತ್ರಿಕೆಯಲ್ಲಿ ಮುದ್ರಿಸಲಿಕ್ಕಾಗುವುದಿಲ್ಲ' ಎಂದು ವಿಷಾದಿಸಿದರು.
ಆದರೆ ತರುಣನು ಇನ್ನೂ ಅಪೇಕ್ಷಿತ ದೃಷ್ಟಿಯಿಂದ ನೋಡುತ್ತ ಕುಳಿತುಕೊಂಡಿದ್ದನ್ನು ಕಂಡು, ಚಟರ್ಜಿಯವರು ಮೃದುವಾಗಿ ಹೇಳಿದರು.
'ಇದನ್ನು ಪ್ರಕಟಿಸುವುದು ನನ್ನಿಂದಾಗದು, ಬದಲಿಗೆ ನೀನು ನನ್ನನ್ನು ಬೇಕಾದರೆ ಪುನಃ ಗಂಗೆಯಲ್ಲಿ ಮುಳುಗಿಸಿದರೂ ಸರಿಯೇ.'
ಈ ಸಂಗತಿಯು ಸಂಪಾದಕರ ಹೊಣೆ ಅದೆಷ್ಟು ಹಿರಿಯದೆನ್ನುವುದನ್ನು ತೋರ್ಪಡಿಸುತ್ತದೆ.
ಲೇ: ಡಾ. ಸಿಂಪಿ ಲಿಂಗಣ್ಣ
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪುಟಗಳು 112, ಬೆಲೆ 100



ಉದಯಭಾನು ಪುಸ್ತಕಮಾಲೆ
ನಾಡು ನುಡಿ ಸಂಸ್ಕೃತಿಗೆ ಸೇವೆ ಸಲ್ಲಿಸಿರುವ ಗಣ್ಯರನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವ ಉದಯಭಾನು ಕಲಾಸಂಘವು ಈ ಸಂಬಂಧ ಹಲವು ಕೃತಿಗಳನ್ನು ಹೊರತಂದಿದೆ. ಈ ಮಾಲಿಕೆಗೆ ಡಾ.ಪಿ.ವಿ. ನಾರಾಯಣ ಅವರು ಪ್ರಧಾನ ಸಂಪಾದಕರು. ಆರ್.ಕೆ. ಶ್ರೀಕಂಠನ್, ಕಿ.ರಂ. ನಾಗರಾಜ, ಆರ್.ಎಂ. ಹಡಪದ, ಡಾ.ಎಚ್.ಎಸ್.ದೊರೆಸ್ವಾಮಿ, ಡಾ.ಬಿ.ಟಿ. ಲಲಿತಾ ನಾಯಕ್, ಡಾ.ಜಿ. ರಾಮಕೃಷ್ಣ, ಬಿ.ವಿ. ರಾಮಮೂರ್ತಿ, ಚಿಂದೋಡಿ ಲೀಲಾ ಕುರಿತು ಬೇರೆಬೇರೆ ಲೇಖಕರು ಕೃತಿ ಬರೆದಿರುವರು.
ಪ್ರ: ಉದಯಭಾನು ಕಲಾ ಸಂಘ, ಬೆಂಗಳೂರು




ಹೊಲತಾಳ ಹಾದಿ
ಆತ್ಮಕಥನ ಎನ್ನುವುದು ವಿಶಿಷ್ಟವಾದ ಸಾಹಿತ್ಯ ಪ್ರಕಾರ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಡಾ. ಸಿದ್ಧಲಿಂಗಯ್ಯ ಹೊಲತಾಳ ಅವರ ಆತ್ಮಕಥನ 'ಹೊಲತಾಳ ಹಾದಿ' ವೈಯಕ್ತಿಕ ಕಥನದ ಜೊತೆಯಲ್ಲೇ ಸಮಕಾಲೀನ ಸಾಮಾಜಿಕ ಚಿತ್ರಣವನ್ನೂ ವ್ಯಷ್ಟಿ ನೆಲೆಯಲ್ಲಿ ನೀಡುತ್ತದೆ. ಆತ್ಮಕಥನಗಳೆಲ್ಲ ಸಂಪೂರ್ಣ ಸತ್ಯವಲ್ಲ ಎಂಬ ಮಾತಿದೆ. ಅದರ ಹೊರತಾಗಿಯೂ ಈ ಕೃತಿಯಲ್ಲಿ ಮನುಷ್ಯತ್ವದ ಶೋಧದ ಹಲವು ಜೀವನ ಪಾಠಗಳಿವೆ.
ಪ್ರ: ಚಾವಡಿ ಪ್ರಕಾಶನ, ಅಂತರಸನಹಳ್ಳಿ, ತುಮಕೂರು, ಪುಟಗಳು 256, ಬೆಲೆ ರು. 150


ಕೆರೆಮನೆ ಚರಿತ್ರೆ
ಯಕ್ಷಗಾನದ ಜೀವಂತಿಕೆಗೆ ಕಾರಣರಾದವರಲ್ಲಿ ಕೆರೆಮನೆ ಕುಟುಂಬದವರು ಪ್ರಮುಖರು. 1934ರಲ್ಲಿ ಕೆರೆಮನೆ ಮೇಳವನ್ನು ಕಟ್ಟಿದವರು ಶಿವರಾಮ ಹೆಗಡೆಯವರು. ಶಿವರಾಮ ಹೆಗಡೆಯವರು ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದರು. ಮೇಳ ಕಟ್ಟುವಲ್ಲಿ ಅವರು ಪಟ್ಟಪರಿಶ್ರಮ, ಕಿರಿಯರನ್ನು ಬೆಳೆಸಿದ ರೀತಿ, ಮೇಳವೇ ಅವರು- ಅವರೇ ಮೇಳವಾದ ರೀತಿ ಇತ್ಯಾದಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಪ್ರೊ.ಎಂ.ಎ. ಹೆಗಡೆಯವರು 'ನೋಡಿರಿ ಧರ್ಮಜ ಫಲುಗುಣಾದಿಗಳು' ಕೃತಿ ಸಂಪಾದಿಸಿದ್ದಾರೆ.
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು 126, ಬೆಲೆ ರು. 120



ಮತ್ತೊಂದು ಅನಾವರಣ
ಕನ್ನಡದಲ್ಲಿ ವೈದ್ಯಕೀಯ ಕ್ಷೇತ್ರದ ವಸ್ತುವನ್ನು ಇಟ್ಟುಕೊಂಡು ಹಲವು ಕಾದಂಬರಿಗಳು ಬಂದಿವೆ. ಆ ಸಾಲಿಗೆ ಡಾ. ಸಿ.ಆರ್. ಪಾರ್ಥಸಾರಥಿಯವರು ಬರೆದಿರುವ 'ಅನಾವರಣ' ಹೊಸ ಸೇರ್ಪಡೆ. ಲೇಖಕರು ಸ್ವತಃ ವೈದ್ಯರಾಗಿರುವ ಕಾರಣ ಇಲ್ಲಿಯ ವಿವರಗಳು ಹೆಚ್ಚು ಅಥೆಂಟಿಕ್. ಇಲ್ಲಿಯ ಪ್ರಮುಖ ಪಾತ್ರ ಡಾ.ವಿಲಾಸ ಆದರ್ಶವಾದಿ. ಅವನಿಗೆ ರಾಜಕೀಯ ವ್ಯಕ್ತಿಗಳಿಂದ ಅಡ್ಡಿಯಾಗುತ್ತದೆ. ಅವನ್ನೆಲ್ಲ ಮೀರಿ ನಿಲ್ಲುವ ಆತನ ನೈತಿಕ ಸ್ಥೈರ್ಯ ಓದುಗರಿಗೆ ಪ್ರಿಯವಾಗುತ್ತದೆ. ವೈದ್ಯಲೋಕದ ಹಲವು ಕಾಯಿಲೆಗಳು ಇಲ್ಲಿ ಕಾಣುತ್ತವೆ.
ಪ್ರ: ಗಿರಿಪದ್ಮ ಪ್ರಕಾಶನ, ಬೆಂಗಳೂರು, ಪುಟಗಳು 384, ಬೆಲೆ ರು. 300

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.