ಖುಷಿ

ಬರಗೂರರ ಸಾಮಾಜಿಕ ವ್ಯಾಖ್ಯಾನ

ಸಮಕಾಲೀನ ಕನ್ನಡ ಸಾಹಿತಿಗಳಲ್ಲಿ ಜನರ ಮನಸ್ಸಿಗೆ ನಾಟುವಂತೆ ಮಾತನಾಡಬಲ್ಲ ಮತ್ತು ಬರೆಯುವ ಸಾಮರ್ಥ್ಯ ಇರುವವರಲ್ಲಿ ಬರಗೂರು...

ಬರಗೂರರ ಸಾಮಾಜಿಕ ವ್ಯಾಖ್ಯಾನ
Published On :

ಸಮಕಾಲೀನ ಕನ್ನಡ ಸಾಹಿತಿಗಳಲ್ಲಿ ಜನರ ಮನಸ್ಸಿಗೆ ನಾಟುವಂತೆ ಮಾತನಾಡಬಲ್ಲ ಮತ್ತು ಬರೆಯುವ ಸಾಮರ್ಥ್ಯ ಇರುವವರಲ್ಲಿ ಬರಗೂರು ರಾಮಚಂದ್ರಪ್ಪನವರೂ ಒಬ್ಬರು. ಅವರು ಬರೆದಿರುವ ಸಾಮಾಜಿಕ ಸಂಗತಿಗಳ ಸಂಕಥನ 'ದೇವರ ಗುಟ್ಟು' ವಿವಿಧ ಸಂದರ್ಭಗಳಲ್ಲಿ ಬರೆದವುಗಳಾಗಿವೆ. ತಾವು ಬದುಕುತ್ತಿರುವ ಸಮಾಜ ಜೀವಂತ ಲೇಖಕನಿಗೆ ಸದಾ ಒಂದು ಸವಾಲಾಗಿರುತ್ತದೆ. ಲೇಖಕ ಸಂಘರ್ಷಮುಖಿಯಾದಾಗಲೆಲ್ಲ ಅವನಿಂದ ಹೊಸ ಆಲೋಚನೆಗಳು ಹೊರಡುತ್ತವೆ. ಬಂಡಾಯ ಚಳವಳಿಯ ಪ್ರಮುಖರಲ್ಲಿ ಒಬ್ಬರೆಂದು ಗುರುತಾಗಿರುವ ಬರಗೂರರು ಸಮಾಜದ ಒರೆಗಲ್ಲಿಗೆ ತಮ್ಮನ್ನು ತಾವು ಉಜ್ಜಿಕೊಳ್ಳುತ್ತಲೇ ವೈಚಾರಿಕತೆಯ ಕಿಚ್ಚನ್ನು ಹಚ್ಚುತ್ತ ಬಂದಿದ್ದಾರೆ. ಅದಕ್ಕೆ ಉದಾಹರಣೆಯಾಗಬಲ್ಲ ಹಲವು ಲೇಖನಗಳು ಇದರಲ್ಲಿವೆ.
 'ಲೇಖಕರಿಗೆ ಆತ್ಮ- ಅವಲೋಕನ ಎರಡು ಇದ್ರೆ ಸಾಕು. ಆಗ ನಾನಷ್ಟೇ ಮುಖ್ಯ ಆಗೊಲ್ಲ. ನಾನು ಬದುಕ್ತಾ ಇರೊ ಸಮಾಜ ಮುಖ್ಯ ಆಗುತ್ತೆ. ಸಮಾಜದೊಳಗೆ ನಾನು; ನನ್ನೊಳಗೆ ಸಮಾಜ. ಪರಸ್ಪರ ಕೈಹಿಡಿದು ಸಾಗಿದೆ ಬದುಕು, ಬರಹ.' ಹೀಗೆಂದು ಅವರು ಇಲ್ಲಿಯ ಲೇಖನವೊಂದರಲ್ಲಿ ಹೇಳಿದ್ದಾರೆ.
 ಬಂಡಾಯ ಸಾಹಿತಿಯಾಗಿ ಬರಗೂರು ದೇವರನ್ನು ಕಾಣುವುದು ಹೇಗೆ? ಅವರು ದೇವರನ್ನು ನಂಬುತ್ತಾರಾ? ದೇವರನ್ನು ಮನುಷ್ಯರಲ್ಲೇ ಕಾಣುವುದಕ್ಕೆ ಅವರು ಪ್ರಾಶಸ್ತ್ಯ ನೀಡುತ್ತಾರೆ. 'ದೇವರ ಗುಟ್ಟು' ಅವರು ರಟ್ಟು ಮಾಡುವುದು ಹೀಗೆ: "ಕಷ್ಟಪಟ್ರೆ, ನಿಷ್ಠೆ ಇದ್ರೆ ದೊಡ್ಡವ್ಯಕ್ತಿ ಆಗಬಹುದಲ್ಲವೆ ಅನ್ನೊ ಪ್ರಶ್ನೆಯಾಗಿ ಒಳಗೆ ಉಳಿದುಬಿಟ್ಟಿತ್ತು. ಆ ತಿಪ್ಪೇಸ್ವಾಮಿ ಹುಟ್ಟಾ ದೇವರಲ್ಲ, ಬೆಳೀತಾ ದೇವರು ಅನ್ನೊ ತಿಳುವಳಿಕೆಯಿಂದ ನನಗೆ ಹೆಚ್ಚು ಪ್ರಿಯನಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಆತ ನಮ್ಮ ಕೇರೀಲೆ ಓಡಾಡೊ ನಮ್ಮ ಮನುಷ್ಯ ಅನ್ನೋವಷ್ಟು ಹತ್ತಿರ ಆಗಿದ್ದ.
ನನಗೆ ದೇವರಲ್ಲಿ ನಂಬಿಕೆ ಇಲ್ಲ. ಹಾಗಂತ ದೇವರಲ್ಲಿ ನಂಬಿಕೆ ಇಲ್ಲದೆ ಇರೋದೇ ದೊಡ್ಡ ಗುಣ ಅಂತ ನಾನು ತಿಳ್ಕೊಂಡಿಲ್ಲ. ದೇವರು ಇದಾನೊ(ಳೊ) ಇಲ್ಲವೊ ಅನ್ನೊ ಜಿಜ್ಞಾಸೆ ನಡೀತಾನೇ ಇರುತ್ತೆ. ಆದರೆ ಈ ಜಿಜ್ಞಾಸೆಯನ್ನು ಮೀರಿ- ದೇವರು- ಧರ್ಮದ ಹೆಸರಲ್ಲಿ ಜನರನ್ನು ಒಡೆಯೊ ಕೆಲ್ಸ, ವಂಚನೆ ಮಾಡೊ ಕೆಲ್ಸ ನಡ್ಯುತ್ತಲ್ಲ- ಅದನ್ನು ವಿರೋಧಿಸೋಣ. ದೇವರ ಹೆಸರಿನಲ್ಲಿ ದ್ವೇಷ ಬಿತ್ತೋ ಬುದ್ಧಿವಂತರಿಗೆ ದೇವರು, ಧರ್ಮ ಅನ್ನೋದು ವಿಷ ತುಂಬಿರೊ ಅಸ್ತ್ರಾನೇ ಹೊರತು ಅಂತಃಕರಣ ಅಲ್ಲ ಅಂತ ಅರಿವು ಮೂಡ್ಸೋಣ. ಸತ್ಯ ಅಂದರೆ- ಆವತ್ತಿನ ನನ್ನ ತಿಪ್ಪೇಸ್ವಾಮಿ, ಕರಿಯಮ್ಮ ಹೀಗೆಲ್ಲ ಅಸ್ತ್ರ ಆಗಿರ್ಲಿಲ್ಲ. ಇವತ್ತೂ ಅವರದು ಅದೇ ಸ್ಥಿತಿ. ಇಲ್ಲೇ ಇರೋದು ದೇವರ ಗುಟ್ಟು!"
ಸಾಹಿತ್ಯದ ಅನನ್ಯತೆ ಯಾವುದು? ಅದನ್ನು ಗುರುತಿಸುವುದು ಹೇಗೆ? "ಐಡೆಂಟಿಟಿ ಅನ್ನೋದು ಬುಸ್ಸೆನ್ನುವ ಹೆಡೆ ಇದ್ದಂತೆ. ಅನ್ಯರ ಎದುರು ಹೆಡೆ ಎತ್ತಿ ಸದೆಬಡಿಯುವ ಐಡೆಂಟಿಟಿಗಳೇ ಇದ್ದಾಗ, ನಾವೂ ಬುಸ್ಸೆನ್ನುವಷ್ಟಾದರೂ ಶಕ್ತಿ ಪಡೆಯಲು ಏನಾದರೂ ಬೇಕಲ್ಲವೆ? ಎದುರು ಇರೋರನ್ನ ಕಚ್ಚೋದು ಬೇಡ; ವಿಷ ಉಣಿಸೋದಂತೂ ಬೇಡವೇ ಬೇಡ. ಆದರೆ ಎದುರಿಗೇ ಬುಸ್ಸೆನ್ನುವ ಹೆಡೆಗಳೇ ಇದ್ದಾಗ ನನ್ನೊಳಗೂ ಏನೋ ಇದೆ ಎಂದು ತೋರಿಸಲು ಹೆಡೆಯೊಂದು ಹುಟ್ಟತೊಡಗುತ್ತೆ. ಆದರೆ ಅದು ಹೊರ ಬರದೆ ಒಳಗೇ ಉಳಿಯುವಂತೆ ಒತ್ತಿ ಹಿಡಿದು ಸಮಾಧಾನಿಸಿ ಬೇರೊಂದು ರೂಪದ 'ಐಡೆಂಟಿಟಿ'ಗೆ ನನ್ನಂಥವರು ಹಂಬಲಿಸಿದಾಗ ಹೆಡೆಯನ್ನು ಅದುಮಿಟ್ಟು ಹೊರಬಂದ ಅಕ್ಷರವೇ ಐಡೆಂಟಿಟಿಯಾಗುತ್ತದೆ." ಇಂಥ ಅಕ್ಷರವೇ ಸಾಹಿತ್ಯ. ಅದು ಸಂಯಮದಿಂದ ಹೊಮ್ಮುವಂಥದ್ದು ಎಂದು ಬರಗೂರರು ಹೇಳುವ ರೀತಿ ಅಪರೂಪದ್ದು.
ಸಾಮಾಜಿಕ ಬದ್ಧತೆ ಇಲ್ಲದವನು ಸಾಹಿತಿಯಾಗಲಾರ ಎಂಬುದು ಅವರ ದೃಢವಾದ ನಂಬಿಕೆ. "ನಾವು ಜನಗಳಿಗೆ ಜವಾಬ್ದಾರರಾಗಬೇಕು. ಜನರಿಗೆ ಜವಾಬ್ದಾರರಾಗುವ ಪ್ರಾಮಾಣಿಕ ಚಳವಳಿಗಳು ಬೇಕು. ಈ ದಿಕ್ಕಿನಲ್ಲಿ ದಲಿತ- ಬಂಡಾಯ ಸಾಹಿತ್ಯ ಚಳವಳಿಯು ತನ್ನ ಅನುಭವದ ಪಾಠದಿಂದ ಮತ್ತಷ್ಟು ಪಕ್ವತೆಯನ್ನು ಪಡೆದು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಜಾತಿವಾದ, ಕೋಮುವಾದಗಳು ವಿಷಬೀಜ ಬಿತ್ತುತ್ತಿರುವ ವಿಷಮ ಸನ್ನಿವೇಶದಲ್ಲಿ ಸಾಂಸ್ಕೃತಿಕ ಕ್ಷೇತ್ರವು ಸಹನೆ ಮತ್ತು ಸಮಾನತೆಗಳ ಆಶಯವನ್ನು ವಿಸ್ತರಿಸಬೇಕು. ವ್ಯಕ್ತಿ ಮತ್ತು ಸಮುದಾಯಗಳ ಅನುಸಂಧಾನದಲ್ಲಿ ಸ್ವಾತಂತ್ರ್ಯದ ಕಲ್ಪನೆಯನ್ನು ಕಟ್ಟಿಕೊಳ್ಳಬೇಕು" ಎಂದು ಅವರು ತಮ್ಮ ಭಾವವನ್ನು ವಿಸ್ತರಿಸುತ್ತಾರೆ.
ಬರಗೂರರ ಲೇಖನಗಳಲ್ಲಿ ಸೂತ್ರರೂಪದ ಮಾತುಗಳಿರುತ್ತವೆ. ಅದಕ್ಕೊಂದು ಉದಾಹರಣೆ- 'ಮಂತ್ರದ ಮಡಿಯಾಗುವುದು ಸಾಹಿತ್ಯವಲ್ಲ, ಶಾಸ್ತ್ರದ ಶಸ್ತ್ರವಾಗುವುದು ಸಂಸ್ಕೃತಿಯಲ್ಲ.'
ಹಿರಿಯ ನಟ ದಿವಂಗತ ರಾಜಕುಮಾರ್ ಅವರ ಬಗ್ಗೆ ಒಂದು ಆಪ್ತವಾದ ಟಿಪ್ಪಣಿ ಇದರಲ್ಲಿದೆ. 'ಡಾ.ರಾಜಕುಮಾರ್ ಅವರು ಹೆಚ್ಚು ಓದದೆ ವಿನಯವನ್ನೇ ವಿದ್ವತ್ತಾಗಿಸಿದರು; ಹಣಕ್ಕೆ ಅಂಟಿಕೊಳ್ಳದೆ ಶ್ರೀಮಂತರಾದರು; ಜಾತಿಯನ್ನು ಮೀರಿದ ಸಾಮಾಜಿಕ ರೂಪಕವೂ ಆದರು...' ಇವು ಬರೀ ಹೇಳಿಕೆಯಾಗಿ ಬರದೆ ಇವನ್ನು ಸಮರ್ಥಿಸುವಂಥ ಹಲವು ಉದಾಹರಣೆಗಳನ್ನು ರಾಜ್ ಬದುಕಿನಿಂದ ಎತ್ತಿ ಕೊಡುತ್ತಾರೆ.  
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 232, ಬೆಲೆ ರು. 150

- ಡಾ. ವಾಸುದೇವ ಶೆಟ್ಟಿ
vasudevs@sify.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.