ಸಾಹಿತಿ ಅಂದ್ರೆ ಯಾರು?
ಸಾಹಿತಿ ಅಂದ್ರೆ ಸದಾ ಕನ್ನಡಕ ಧರಿಸುವವನು ಮತ್ತು ತಲೆಗೂದಲು ಬಾಚದವನು. ಯಾವಾಗಲೂ ಆತ ಎಲ್ಲದರ ಬಗ್ಗೆ ವ್ಯಗ್ರಗೊಂಡಿರುತ್ತಾನೆ...

ಸಾಹಿತಿ ಅಂದ್ರೆ ಸದಾ ಕನ್ನಡಕ ಧರಿಸುವವನು ಮತ್ತು ತಲೆಗೂದಲು ಬಾಚದವನು. ಯಾವಾಗಲೂ ಆತ ಎಲ್ಲದರ ಬಗ್ಗೆ ವ್ಯಗ್ರಗೊಂಡಿರುತ್ತಾನೆ, ಉಳಿದ ಸಮಯದಲ್ಲಿ ಖಿನ್ನನಾಗಿರುತ್ತಾನೆ. ಯಾವಾಗಲೂ ಬಾರಲ್ಲಿರುತ್ತಾನೆ, ತನ್ನಂಥ ಇತರ ಕನ್ನಡಕಧಾರಿ ಸಾಹಿತಿಗಳೊಡನೆ ಜಗಳಾಡುತ್ತ. 'ಆಳವಾದ' ಸಂಗತಿಗಳ ಬಗ್ಗೆ ಹೇಳುತ್ತಿರುತ್ತಾನೆ, ತಲೆಯಲ್ಲಿ ಮುಂದಿನ ಕಾದಂಬರಿಯ ಐಡಿಯಾ ತುಂಬಿಕೊಂಡಿರುತ್ತಾನೆ.
ತನ್ನ ತಲೆಮಾರಿನವರಿಗೆ ಆತ ಅರ್ಥವಾಗಕೂಡದು, ಅದು ಅವನ ಕರ್ತವ್ಯ. ಮೀಡಿಯೋಕರ್ ಆಗಿರುವ ತಲೆಮಾರಿನಲ್ಲಿ ಜನಿಸಿದ್ದೇನೆ ಅಂದುಕೊಂಡಿರುತ್ತಾನೆ. ತಾನು ಬರೆದದ್ದು ಅರ್ಥವಾದರೆ ತಾನು ಜೀನಿಯಸ್ ಎನಿಸುವ ಸಾಧ್ಯತೆ ಇಲ್ಲವಾಗುತ್ತದೆ ಎಂಬ ಆತಂಕ ಅವನಿಗೆ. ಸಾಮಾನ್ಯ ಮನುಷ್ಯನ ಶಬ್ದಭಂಡಾರ 3000 ಪದಗಳು ಮಾತ್ರ. ಆದರೆ ಈ ಪದಗಳನ್ನೆಂದೂ ಸಾಹಿತಿ ಬಳಸಬಾರದು, ಯಾಕೆಂದರೆ ಡಿಕ್ಷನರಿಯಲ್ಲಿ ಇನ್ನೂ ಒಂದು ಲಕ್ಷ ಪದಗಳಿವೆಯಲ್ಲ?
ಸಾಹಿತಿ ಬರೆದದ್ದು ತನ್ನ ಓರಗೆಯ ಸಾಹಿತಿಗಳಿಗೆ ಮಾತ್ರ ಅರ್ಥವಾಗಬಲ್ಲದು- ಪರಸ್ಪರರು ದ್ವೇಷಿಸುತ್ತಿದ್ದರೂ. ಎಲ್ಲರೂ 'ಅತ್ಯಂತ ಸಂಕೀರ್ಣ ಕೃತಿ' ಪ್ರಶಸ್ತಿಗೆ ಸ್ಪರ್ಧಿಸುತ್ತಿರುತ್ತಾರೆ. ಆಗಾಗ ಜಾಗತೀಕರಣ, ಪರಿಪ್ರೇಕ್ಷ್ಯ, ಅನುಸಂಧಾನ ಮುಂತಾದ ಪದಗಳನ್ನು ಉದುರಿಸುತ್ತಿರುತ್ತಾನೆ. ಇತರರನ್ನು ಬೆಚ್ಚಿಸಬೇಕಾದಾಗ 'ಐನ್‌ಸ್ಟೈನ್ ಒಬ್ಬ ಮೂರ್ಖ' 'ಟಾಲ್‌ಸ್ಟಾಯ್ ಬೂರ್ಜ್ವಾ ಸಾಹಿತಿ' ಮುಂತಾದ ಹೇಳಿಕೆಗಳನ್ನು ವಗಾಯಿಸುತ್ತಿರುತ್ತಾನೆ.
ಈಗ ಏನು ಓದುತ್ತಿದ್ದೀರಿ ಎಂದು ಕೇಳಿದರೆ, ಯಾರೂ ಕಂಡು ಕೇಳರಿಯದ ಪುಸ್ತಕದ ಹೆಸರನ್ನು ಹೇಳುತ್ತಾನೆ. ತರುಣಿಯರನ್ನು ಮೆಚ್ಚಿಸಬೇಕಾದಾಗ 'ನಾನು ಕವಿ' ಎನ್ನುತ್ತ ನ್ಯಾಪ್‌ಕಿನ್ ಮೇಲೂ ಪದ್ಯದ ಸಾಲುಗಳನ್ನು ಗೀಚಿ ಕೊಡುತ್ತಾನೆ.
ಈತ ಸಲೀಸಾಗಿ ಪುಸ್ತಕ ವಿಮರ್ಶೆಯ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಅಲ್ಲಿ ಆತ ತನ್ನ ಗೆಳೆಯ ಗೆಳತಿಯರ ಬೆನ್ನು ಕೆರೆಯುವ ಸಾಲುಗಳನ್ನು ಬರೆಯುವುದೇ ಹೆಚ್ಚು. ಅಲ್ಲಿ ಆತ ಬರೆದ ಸಾಲುಗಳು ಪದಗಳನ್ನು ನೋಡಿ ಓದುಗ 'ಎಂಥ ಪಾಂಡಿತ್ಯ' ಎಂದು ಮೆಚ್ಚಿಕೊಳ್ಳುತ್ತಾನೆ. ಆದರೆ ಪುಸ್ತಕ ಓದಹೋಗದೆ ಪರಾರಿಯಾಗುತ್ತಾನೆ.
- ಜನಪ್ರಿಯ ಕಾದಂಬರಿಕಾರ ಪೌಲೋ ಕೊಯೆಲೋ ತಮಾಷೆಯಾಗಿ ಬರೆದ ಸಾಲುಗಳಿವು. 'ಲೈಕ್ ದಿ ಪ್ಲೋಯಿಂಗ್ ರಿವರ್' ಕೃತಿಯ ಪ್ರಸ್ತಾವನೆಯಲ್ಲಿದೆ.
-ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


