ಖುಷಿ

ನವೋದಯದ ಕವಿಪುಂಗವ ಅಮ್ಮೆಂಬಳ ಶಂಕರನಾರಾಯಣ ನಾವಡ

'ಅಡ್ಡ ಧೋತರ, ನೀಲಿ ಕೋಟು, ಅಚ್ಚುಕಟ್ಟಾಗಿ ಬೈತಲೆ ತೆಗೆದು ಬಾಚಿದ್ದ ಕಪ್ಪು ಗುಂಗುರು ಕೂದಲು, ಶುಭ್ರವಾದ ಮೋರೆಯಲ್ಲಿ ನಲಿಯುವ ಮಂದಹಾಸ...

ನವೋದಯದ ಕವಿಪುಂಗವ ಅಮ್ಮೆಂಬಳ ಶಂಕರನಾರಾಯಣ ನಾವಡ
Published On :

'ಅಡ್ಡ ಧೋತರ, ನೀಲಿ ಕೋಟು, ಅಚ್ಚುಕಟ್ಟಾಗಿ ಬೈತಲೆ ತೆಗೆದು ಬಾಚಿದ್ದ ಕಪ್ಪು ಗುಂಗುರು ಕೂದಲು, ಶುಭ್ರವಾದ ಮೋರೆಯಲ್ಲಿ ನಲಿಯುವ ಮಂದಹಾಸ, ಮೃದುವಾದ, ಉದ್ವೇಗರಹಿತವಾದ ಮಾತು, ನಾಟಕೀಯತೆಯ ಸೋಂಕೂ ಇಲ್ಲದ ಸರಳವಾದ ನಿಲುವು' ಇದು ಪ್ರಾಧ್ಯಾಪಕ, ಹೆಸರಾಂತ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರು 1989ರಲ್ಲಿ ಅಚ್ಚೊತ್ತಿದ್ದ ತನ್ನ ವಿದ್ಯಾಗುರು, ಸಾಹಿತ್ಯದ ಗುರುಗಳಾದ ನಾಡಿನ ಹಿರಿಯ ಕವಿ ಶ್ರೀ ಅಮ್ಮೆಂಬಳ ಶಂಕರನಾರಾಯಣ ನಾವಡ ಅವರನ್ನು 1976ರಲ್ಲಿ - 27 ವರ್ಷಗಳ ಬಳಿಕ - ನುಡಿಚಿತ್ರವಾಗಿಸಿದ್ದು ಹೀಗೆ. ಅನಂತರದ ವರ್ಷಗಳಲ್ಲೂ ಅಮ್ಮೆಂಬಳರು ಹೆಚ್ಚೂ ಕಡಿಮೆ ಹೀಗೇನೇ. ಬದಲಾವಣೆಯೆಂದರೆ ನೀಲಿ ಕೋಟು ಬಿಟ್ಟಿದ್ದು; ಗುಂಗುರು ಕೂದಲು ಬೆಳ್ಳಗಾದದ್ದು. ಇಷ್ಟೇ, ಇಷ್ಟೇ!
ಹೊಸಗನ್ನಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾಣ್ಕೆ ಯಾರು? ಎಷ್ಟು? ಅದು ಮಹಾ ಪ್ರಬಂಧಕ್ಕೆ ಸೂಕ್ತವಾದ ವಸ್ತು! ತಟ್ಟನೆ ಹೇಳಬಹುದಾದ ಹೆಸರುಗಳು - ಅದೂ ಕಾವ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ - ಪಂಜೆ ಮಂಗೇಶ ರಾಯರು, ಮಂಜೇಶ್ವರ ಗಣಪತಿರಾಯರು, ಕಡೆಂಗೋಡ್ಲು ಶಂಕರ ಭಟ್ಟರು, ಎಸ್. ವೆಂಕಟರಾಜರು, ಅ.ಗೌ.ಕಿನ್ನಗೋಳಿ ಅವರು, ಕಯ್ಯಾರ ಕಿಂಞಣ್ಣ ರೈಗಳು ಹಾಗೂ ಅಮ್ಮೆಂಬಳ ಶಂಕರ ನಾರಾಯಣ ನಾವಡರು ಮೊದಲಾದವರು.
ಶ್ರೀ ಅಮ್ಮೆಂಬಳ ಶಂಕರನಾರಾಯಣ ನಾವಡರು 'ಅಮ್ಮೆಂಬಳ'ರು ಎಂದೇ ಪರಿಚಿತರಾದವರು; 'ಸುಹೃದಯ ಕವಿ'ಗಳು ಎಂದೇ ಪ್ರಸಿದ್ಧರಾದವರು; ಶುದ್ಧ ಶೃಂಗಾರ ಕವಿಗಳೆಂದೂ ಹೊಗಳಿಸಿಕೊಂಡವರು. ಗೀತ ನಾಟಕಗಳಲ್ಲೂ ಎದ್ದು ತೋರಿದವರು. ಸಂಸ್ಕೃತದ ಅತ್ಯುತ್ತಮ ಭಾಗಗಳನ್ನು ಕನ್ನಡಕ್ಕೆ ಲೀಲಾಜಾಲವಾಗಿ, ರಸಾತ್ಮಕವಾಗಿ ವರ್ಗಾಯಿಸಿದವರು; ಅನುವಾದಕ್ಕೆ ಇವರೇ ಸೈ ಎಂದೇ ಕೀರ್ತಿತರಾದವರು.
ಲೇಖಕ: ವಿ. ಗ. ನಾಯಕ
ಕೃತಿ: ನವೋದಯ ಕವಿಪುಂಗವ ಅಮ್ಮೆಂಬಳ ಶಂಕರನಾರಾಯಣ ನಾವಡ
ಪ್ರಕಾಶನ: ಕಾಂತಾವರ ಕನ್ನಡ ಸಂಘ



ಸಾಹಿತ್ಯ ಶಿಶಿಲ

ಹಿರಿಯ ಲೇಖಕ ಡಾ.ಪ್ರಭಾಕರ ಶಿಶಿಲ ಅವರಿಗೆ 60 ತುಂಬಿದ ಸಂದರ್ಭದಲ್ಲಿ 'ಸಾಹಿತ್ಯ ಶಿಶಿಲ' ಎನ್ನುವ ಗ್ರಂಥವನ್ನು ಡಾ.ಮಾಧವ ಪೆರಾಜೆಯವರು ಸಂಪಾದಿಸಿದ್ದಾರೆ. ಇದರಲ್ಲಿ ಶಿಶಿಲರ ಕಥಾಸಾಹಿತ್ಯ, ಅವರ ಕಾದಂಬರಿಗಳು, ಪ್ರವಾಸ, ಬೇಟೆ ಸಾಹಿತ್ಯ, ಪ್ರಬಂಧ, ಅನುಭವ ಕಥನ, ಯಕ್ಷಗಾನ ಮತ್ತು ಅರ್ಥಶಾಸ್ತ್ರದ ಕುರಿತು ಪರಿಣತರು ಬರೆದಿದ್ದಾರೆ. ಡಾ.ಜಿ.ಎಸ್.ಶಿವರುದ್ರಪ್ಪ, ಕುಂ.ವೀರಭದ್ರಪ್ಪ, ಡಾ.ಅಮೃತ ಸೋಮೇಶ್ವರ, ಡಾ.ಎಂ.ಪ್ರಭಾಕರ ಜೋಷಿ, ರಮೇಶ ಕೆದಿಲಾಯ, ಟಿ.ಪಿ.ಅಶೋಕ ಮೊದಲಾದವರ ಬರೆಹಗಳು ಇದರಲ್ಲಿವೆ.
ಪ್ರ: ರಾಜ್ ಪ್ರಕಾಶನ, ಮೈಸೂರು, ಪುಟಗಳು 304, ಬೆಲೆ ರು. 190



ಲೇಖಕಿಯರ ಮಾಹಿತಿ ಕೋಶ

ಕನ್ನಡ ಲೇಖಕಿಯರ ಮಾಹಿತಿ ಕೋಶ ಸಾಹಿತ್ಯಾಸಕ್ತರಿಗೆ ಮತ್ತು ಕಾರ್ಯಕ್ರಮಗಳ ಆಯೋಜಕರಿಗೆ ಅಗತ್ಯವಾಗಿ ಬೇಕಾಗಿರುವ ಕೃತಿ. ಲೇಖಕಿಯರ ವೈಯಕ್ತಿಕ ಮಾಹಿತಿಯ ಜೊತೆಗೆ ಆಯಾ ಲೇಖಕಿಯ ಮೊದಲ ಪ್ರಕಟಿತ ಕೃತಿಯ ವಿವರಗಳು, ಪ್ರಕಟವಾದ ಒಟ್ಟೂ ಕೃತಿಗಳು, ಯಾವಯಾವ ಪ್ರಕಾರದಲ್ಲಿ ಏನೇನು ಕೃತಿಗಳ ರಚನೆಯಾಗಿದೆ, ಯಾವ ಬಹುಮಾನಗಳು ಬಂದಿವೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಮಜಿಕ ಕ್ಷೇತ್ರಗಳಿಗೆ ಅವರ ಕೊಡುಗೆ, ಜೊತೆಗೆ ಅವರ ಭಾವಚಿತ್ರವನ್ನೂ ಇದು ಒಳಗೊಂಡಿದೆ. ಇದೊಂದು ಸಂಕ್ಷಿಪ್ತ ಸಾಹಿತ್ಯ ಚರಿತ್ರೆ.
ಪ್ರ: ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು, ಪುಟಗಳು 452, ಬೆಲೆ ರು. 350



ಪ್ರಾಚೀನ ಚೀನದಲ್ಲಿ ಬೌದ್ಧಧಮ್ಮ
ಬೌದ್ಧ ಧರ್ಮ ಹುಟ್ಟಿದ್ದು ಭಾರತದಲ್ಲಾದರೂ ಪ್ರಬಲವಾಗಿ ಬೆಳೆದದ್ದು ಚೀನದಲ್ಲಿ. ವಿಶ್ವಪ್ರೇಮವನ್ನು ಬೆಳೆಸುವುದಕ್ಕಿಂತ ಮೇಲಾದ ಸದ್ಗುಣವಿಲ್ಲ, ಮನಃಶಾಂತಿಗಿಂತ ಮೇಲಾದ ಸುಖವಿಲ್ಲ ಎಂಬುದನ್ನು ಸಾರುವ ಬೌದ್ಧಧರ್ಮವು ಭಾರತದ ಎಲ್ಲೆಯನ್ನು ಮೀರಿ ಚೀನದಲ್ಲಿ ಪ್ರಸರಿಸುವಾಗ ಯಾವ ರೀತಿಯ ಸಂಘರ್ಷವನ್ನು ಎದುರಿಸಬೇಕಾಯಿತು, ಅಲ್ಲಿಯ ಯಾವ ರಾಜ ಮನೆತನದವರು ಅದನ್ನು ಪೋಷಿಸಿದರು ಎಂಬಿತ್ಯಾದಿ ವಿವರಗಳನ್ನು ಡಾ.ಸಿ. ಚಂದ್ರಪ್ಪ ಅವರು 'ಪ್ರಾಚೀನ ಚೀನದಲ್ಲಿ ಬೌದ್ಧಧಮ್ಮ' ಕೃತಿಯಲ್ಲಿ ನೀಡಿದ್ದಾರೆ.
ಪ್ರ: ಬೋಧಿವೃಕ್ಷ ಪ್ರಕಾಶನ, ಬೆಂಗಳೂರು, ಪುಟಗಳು 160, ಬೆಲೆ ರು. 140


ಬಟ್ಟೆ ಇಲ್ಲದ ಊರಿನಲ್ಲಿ
ಡಾ.ಮಿರ್ಜಾ ಬಷೀರ್ ಅವರು ತಡವಾಗಿ ಕತೆಗಳನ್ನು ಬರೆಯಲು ಆರಂಭಿಸಿದರು. 'ಬಟ್ಟೆ ಇಲ್ಲದ ಊರಿನಲ್ಲಿ' ಅವರ ಮೊದಲ ಕಥಾಸಂಕಲನ. ಇದರಲ್ಲಿ ಹತ್ತು ಕತೆಗಳಿವೆ. ಇವನ್ನು ಓದಿದ ಮೇಲೆ ಇವರು ಏಕೆ ಇಷ್ಟು ತಡವಾಗಿ ಬರೆಯಲು ಆರಂಭಿಸಿದರು, ಇನ್ನೂ ಬೇಗನೆ ಬರೆಯಬಾರದಿತ್ತೆ ಎಂದು ಅನ್ನಿಸದೆ ಇರದು. ಗ್ರಾಮೀಣ ನೆಲೆಯ ಜೀವನ ವೈವಿಧ್ಯದ ಅನುಭವಗಳು ಆತ್ಮಕಥನದಂತೆ ಸಾಂದ್ರವಾಗಿ ಈ ಕತೆಗಳಲ್ಲಿ ಮೈ ಪಡೆದಿವೆ. ಕನ್ನಡದ ಪ್ರಮುಖ ಕತೆಗಾರರಲ್ಲಿ ಇವರಿಗೆ ನಿಶ್ಚಿತವಾಗಿ ಸ್ಥಾನವಿದೆ.
ಪ್ರ: ಅಂತಃಕರಣ ಪ್ರಕಾಶನ, ಬೆಂಗಳೂರು, ಪುಟಗಳು 152,, ಬೆಲೆ ರು. 110

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.