

ಶೀಘ್ರವೇ ಹುವೈ ಹವಾ
ನೀವು ಬಳಸುವ ಒಂದೇ ಸ್ಮಾರ್ಟ್ಪೋನ್ನಲ್ಲಿ ಆ್ಯಂಡ್ರಾಯ್ಡ್ ಹಾಗೂ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸಲು ಅವಕಾಶ ನೀಡುವ ವಿನೂತನ ಪ್ರಯತ್ನಕ್ಕೆ ಹುವೈ ಕೈಹಾಕಿದೆ.
ಹಗಲಿಡೀ ಆ್ಯಂಡ್ರಾಯ್ಡ್ ಬಳಸಿ ಬೇಸರ ಬಂದಿರುತ್ತದೆ ಅಥವಾ ವಿಂಡೋಸ್ ಫೋನ್ ಅನ್ನು ನೋಡಿದಾಗ ಬದಲಾವಣೆ ಬೇಕೆನಿಸುತ್ತದೆ. ಆದರೆ ಪ್ರತಿ ದಿನ, ವಾರ ಅಥವಾ ತಿಂಗಳಿಗೊಮ್ಮೆ ಮೊಬೈಲ್ ಬದಲಿಸುವುದು ಕಷ್ಟ ಹಾಗೂ ಸ್ವಲ್ಪ ಶೋಕಿಯೂ ಆಗುತ್ತದೆ. ಹೆಚ್ಚೆಂದರೆ ಮೊಬೈಲ್ ಥೀಮ್ ಬದಲಿಸಬಹುದು, ಪ್ರತ್ಯೇಕ ವಾಲ್ಪೇಪರ್ ಹಾಕಿಕೊಳ್ಳಬಹುದು, ಇಲ್ಲವಾದಲ್ಲಿ ಕೇಸ್ ಕವರ್ ಬದಲಿಸಬಹುದಷ್ಟೆ. ಆದರೆ ಆ್ಯಂಡ್ರಾಯ್ಡ್ ಬದಲು, ವಿಂಡೋಸ್, ಅದೂ ವೈರಾಗ್ಯ ಮೂಡಿಸಿದರೆ ಆ್ಯಪಲ್ ಫೋನ್ ಖರೀದಿಸುವಷ್ಟು ಶ್ರೀಮಂತಿಕೆ ನಮ್ಮ ನಿಮ್ಮಲ್ಲಿಗೆ ಬಂದಿಲ್ಲ.
ಮೊಬೈಲ್ ಬಳಕೆದಾರರಲ್ಲಿ ಇನ್ನೊಂದು ವರ್ಗವೂ ಇದೆ. 'ಈ ಆ್ಯಂಡ್ರಾಯ್ಡ್ ಫೋನ್ ಯೂಸ್ ಮಾಡಿ ಬೇಸರವಾಗ್ತಿದೆ' ಎನ್ನುವ ಯುವಜನತೆ ಇದ್ದಾರೆ. ಆಗ ಕಣ್ಣೆದುರಿಗೆ ವಿಂಡೋಸ್ ಅಥವಾ ಆ್ಯಪಲ್ ಕಣ್ಣಿಗೆ ಬೀಳುತ್ತದೆ. ಅದೂ ಬೇಸರ ಮೂಡಿಸಿದರೆ ಮುಂದೇನು ಎಂಬ ಪ್ರಶ್ನೆಗೆ ಚೀನಾ ಮೂಲದ ಹುವೈ ಕಂಪನಿ ಉತ್ತರ ನೀಡಿದೆ. ಎರಡು ತಲೆಯ ಸ್ಮಾರ್ಟ್ಪೋನ್ ಶೀಘ್ರದಲ್ಲೇ ನಿಮ್ಮ ಕೈನಲ್ಲಿರಲಿದೆ.
ನೀವು ಬಳಸುವ ಒಂದೇ ಸ್ಮಾರ್ಟ್ಪೋನ್ನಲ್ಲಿ ಆ್ಯಂಡ್ರಾಯ್ಡ್ ಹಾಗೂ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸಲು ಅವಕಾಶ ನೀಡುವ ವಿನೂತನ ಪ್ರಯತ್ನಕ್ಕೆ ಹುವೈ ಕೈಹಾಕಿದೆ. ಗ್ರಾಹಕರು ತಮಗೆ ಬೇಕಾದ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಿಕೊಳ್ಳಬಹುದು. ಹುವೈ ಸಂಸ್ಥೆ ಹೇಳುವ ಪ್ರಕಾರ, ಇನ್ನು ನಾಲ್ಕೈದು ತಿಂಗಳಲ್ಲಿ ಇಂಥದ್ದೊಂದು ಮೊಬೈಲ್ ಸ್ಮಾರ್ಟ್ ಮಾರುಕಟ್ಟೆಗೆ ಬರಲಿದೆ. ಇಂಥದ್ದೊಂದು ಕಾಂಬಿನೇಷನ್ ಮೊಬೈಲ್ ಜಗತ್ತನ್ನು ಹೊಸದೊಂದು ಮಜಲಿಗೆ ಕೊಂಡೊಯ್ಯಬಹುದು.
ಡ್ಯುಯಲ್ ಆಪರೇಟಿಂಗ್ ಸಿಸ್ಟಮ್ ಎನ್ನುವುದು ತಾಂತ್ರಿಕ ಲೋಕಕ್ಕೆ ಹೊಸತಲ್ಲ. ಅರ್ಧ ದಶಕಗಳ ಹಿಂದೆಯೇ ಕಂಪ್ಯೂಟರ್ ಲೋಕದಲ್ಲಿ ಎರಡು ಆಪರೇಟಿಂಗ್ ಸಿಸ್ಟಮ್ಗಳನ್ನು ಬಳಸಿ ಕೆಲಸ ಮಾಡಲಾಗುತ್ತಿತ್ತು. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನಲ್ಲಿ ಹಾರ್ಡ್ಡಿಸ್ಕ್ಗಳನ್ನು ಸ್ಪ್ಲಿಟ್ ಮಾಡಿ ಎರಡು ಓಎಸ್(ಆಪರೇಟಿಂಗ್ ಸಿಸ್ಟಮ್)ಗಳನ್ನು ಇನ್ಸ್ಟಾಲ್ ಮಾಡಲಾಗುತ್ತಿತ್ತು. ಅಧಿಕ ರ್ಯಾಮ್ ಹಾಗೂ ಹಾರ್ಡ್ಡಿಸ್ಕ್ ಸಾಮರ್ಥ್ಯ ಹೊಂದಿದ್ದರೆ ಇದು ಬಳಕೆ ಸ್ನೇಹಿಯಾಗುತ್ತಿತ್ತು. ಇಲ್ಲವಾದಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ತುಸು ನಿಧಾನವಾಗಿ ಕೆಲಸ ಮಾಡುತ್ತಿತ್ತು. ಐಟಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದುಡಿಯುವ ಅದೆಷ್ಟೊ ಉದ್ಯೋಗಿಗಳು ಡ್ಯುಯಲ್ ಆಪರೇಟಿಂಗ್ ಸಿಸ್ಟಮ್ ಇರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ವೈರಸ್ಗಳಿಂದ ದೂರವಿರುವ ಓಎಸ್ಗಳನ್ನು ಕಚೇರಿ ಕೆಲಸಕ್ಕೆ ಹಾಗೂ ವೈಯಕ್ತಿಕ ಬಳಕೆಗೆ ವಿಂಡೋಸ್ ಬಳಸುವವರಿದ್ದಾರೆ.
ಇದಾದ ಬಳಿಕ ಸರಿಯಾಗಿ ಒಂದು ವರ್ಷದ ಹಿಂದೆ ಪ್ರತಿಷ್ಠಿತ ಆಸಸ್ ಕಂಪನಿಯು ಡ್ಯುಯಲ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಟ್ಯಾಬ್ಲೆಟ್ ತಯಾರಿಸುತ್ತಿರುವ ಬಗ್ಗೆ ಸೂಚನೆ ನೀಡಿತ್ತು. ಆದರೆ ಜಪಾನ್ ಮೂಲದ ಈ ಕಂಪನಿ ಈ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ತರಲು ವಿಳಂಬ ಮಾಡುತ್ತಿದೆ. ನಿರೀಕ್ಷೆಗೆ ತಕ್ಕಂತೆ ಎರಡು ಓಎಸ್ನಲ್ಲಿ ಟ್ಯಾಬ್ಲೆಟ್ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಡ್ಯುಯಲ್ ಲಾಜಿಕ್ ಏನು?
ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ಫೋನ್ ಯಾವುದಾದರೊಂದು ಓಎಸ್ಗಳಿಂದ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಬೂಟಿಂಗ್ ಪ್ರಾರಂಭವಾದಾಗ ವಿಂಡೋಸ್ ಅಥವಾ ಆ್ಯಂಡ್ರಾಯ್ಡ್ನ ಲೋಗೋ ಕಾಣಿಸಿಕೊಳ್ಳುತ್ತದೆ. ಆದರೆ ಡ್ಯುಯಲ್ ಓಎಸ್ ಇದ್ದಾಗ, ಬೂಟಿಂಗ್ ಪ್ರಾರಂಭವಾದಾಗ ಅಂದರೆ ಮೊಬೈಲ್ ಅನ್ನು ಸ್ವಿಚ್ ಆನ್ ಮಾಡುವಾಗ ವಿಂಡೋಸ್ ಅಥವಾ ಆ್ಯಂಡ್ರಾಯ್ಡ್ ಆಪೇರೇಟಿಂಗ್ ಸಿಸ್ಟಮ್ನಲ್ಲಿ ಬಳಕೆದಾರರು ತಮ್ಮ ಆಯ್ಕೆ ಮಾಡಿಕೊಳ್ಳಬಹುದು. ಎರಡೂ ಓಎಸ್ಗಳನ್ನು ಒಂದೇ ಬಾರಿಗೆ ಬಳಸುವುದು ಅಸಾಧ್ಯ. ಆದರೆ ಯಾವುದೇ ಆಪರೇಟಿಂಗ್ ಸಿಸ್ಟಮ್ ಬೇಸರವಾದರೆ ಮತ್ತೊಂದಕ್ಕೆ ಸ್ವಿಚ್ ಓವರ್ ಆಗಬಹುದು. ಮೊಬೈಲ್ನಲ್ಲಿನ ಡಾಟಾಗಳು ಪ್ರತ್ಯೇಕ ಮೆಮೋರಿಯಲ್ಲಿ ಸೇವ್ ಆಗುವುದಿಲ್ಲ. ಆದ್ದರಿಂದ ಇದು ಹೆಚ್ಚು ಆಕರ್ಷಕವಾಗಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಆದರೆ ಒಂದೇ ಅಪ್ಲಿಕೇಷನ್ ಎರಡೂ ಓಎಸ್ನಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.
ಈ ತಂತ್ರಜ್ಞಾನವು ನಿಮ್ಮನ್ನು ಸಂತೃಪ್ತಗೊಳಿಸದಿದ್ದರೂ ಅತೃಪ್ತಗೊಳಿಸಲಾರದು. ಇನ್ನು ಸ್ಮಾರ್ಟ್ ಮಾರುಕಟ್ಟೆಯಲ್ಲಿ ಕೇವಲ ಬ್ರ್ಯಾಂಡ್ ಗಲಾಟೆ ಇರಬಹುದೇ ಹೊರತು, ಆಪರೇಟಿಂಗ್ ಸಿಸ್ಟಮ್ ಕುರಿತ ಕ್ಯಾತೆಗೆ ಪರಿಹಾರವಾಗಬಲ್ಲದು.
-ರಾಜೀವ ಹೆಗಡೆ
meet.hegde@gmail.com