ಮೊದಲ ಖುಷಿ
ಕನಸು ಹಡೆಯುವುದನ್ನೇ ಕಸುಬು ಮಾಡಿಕೊಂಡಿರುವ ಅವನು ಮನೆಯ ತಾರಸಿ ಮೇಲೇರಿದ್ದಾನೆ,

ಕನಸು ಹಡೆಯುವುದನ್ನೇ ಕಸುಬು ಮಾಡಿಕೊಂಡಿರುವ ಅವನು ಮನೆಯ ತಾರಸಿ ಮೇಲೇರಿದ್ದಾನೆ, ಹೊಸ ಕನಸಿನೊಂದಿಗೆ ಮಾತಿಗಿಳಿಯಲು. ಹಳಸಲಾದರೂ ಅಕಾರಣವಾಗಿ ಖುಷಿ ಕರುಣಿಸುವ ಹಳೇ ಕನಸುಗಳನ್ನು ನೆನೆದು ಮುದ್ದಿಸುತ್ತಿದ್ದಾನೆ.
ಅವನು ಇರುವುದೇ ಹಾಗೆ. ಬದುಕೆಂದರೆ ಕನಸು ಹೆರುವ ಕ್ರಿಯೆ ಎಂದು ನಂಬಿದವನು. ಎಲ್ಲರ ಕಣ್ಣಿಗೂ ಹುಚ್ಚನಂತೆ ಕಾಣುವವನು. ಕನಸುಗಳೊಂದಿಗೆ ಮುನಿಸಿಕೊಂಡಾಗ ಅವನಿಗೂ ತನ್ನದು ಹುಚ್ಚುತನ ಅನಿಸಿದ್ದಿದೆ. ತಾನು ಕಾಣುವ ಹಲವು ಕನಸುಗಳಿಗೆ ವಾಸ್ತವದ ನಂಟಿಲ್ಲವೆಂದು ಗೊತ್ತಿದ್ದರೂ ಅಂಥ ಕನಸುಗಳೊಂದಿಗೆ ಪದೇ ಪದೆ ಮಾತಿಗಿಳಿಯುತ್ತಾನೆ. ಆ ಮೂಲಕ ಕನಸುಗಳ ಲೋಕದಲ್ಲಿ ವಿಹರಿಸುತ್ತಾನೆ. ಕನಸು ಕಾಣುವ ಜೊತೆಗೆ ನಾನಿಲ್ಲದ ಈ ಜಗತ್ತು ಹೇಗಿರಬಹುದು ಎಂದೂ ಚಿಂತಿಸುತ್ತಾನೆ. ತಾನು ಸತ್ತರೆ ಯಾರೆಲ್ಲ ಅಳಬಹುದು, ಹೇಗೆಲ್ಲ ಕಣ್ಣೀರಿಡಬಹುದು, ಯಾವ್ಯಾವ ವಿಶೇಷ ಗುಣಗಳನ್ನು ತನ್ನ ವ್ಯಕ್ತಿತ್ವಕ್ಕೆ ಲೇಪಿಸಿ ಗುಣಗಾನ ಮಾಡಬಹುದು ಎಂದೆಲ್ಲ ಊಹಿಸಲು ಮುಂದಾಗುತ್ತಾನೆ.
ಮನಸ್ಸಿಗೆ ಬಿಡುವು ನೀಡದೇ ಕನಸುಗಳನ್ನು ಹೆರುವ ಅವನು, ಸಾವಿನ ವಿಚಾರ ಬಂದ ಕೂಡಲೇ ಕನಸುಗಳ ಓಟಕ್ಕೆ ತಡೆ ಒಡ್ಡುತ್ತಾನೆ. ಬದುಕಿನ ಅರ್ಥ ಹುಡುಕುವ ಮತ್ತೊಂದು ನಮೂನೆಯ ಹುಚ್ಚಾಟವನ್ನು ತನ್ನದಾಗಿಸಿಕೊಳ್ಳುತ್ತಾನೆ.
ಬದುಕಿನ ಎಲ್ಲ ಸೂತ್ರಗಳನ್ನೂ ಅರಿಯಬೇಕೆನ್ನುವ ಹುಚ್ಚು ಹವಣಿಕೆ ಅವನದು. ವರ್ತಮಾನದಲ್ಲಿ ಜರುಗುವ ಘಟನೆಗಳು ಭವಿಷ್ಯದಲ್ಲಿ ಹೇಗೆಲ್ಲ ತಿರುವು ಪಡೆದುಕೊಳ್ಳುತ್ತವೆ ಎಂಬುದನ್ನು ಗುರುತಿಸುವಷ್ಟರ ಮಟ್ಟಿಗೆ ತಾನು ಬದುಕನ್ನು ಅರ್ಥೈಸಿಕೊಳ್ಳಬೇಕೆಂಬ ಹಠಕ್ಕೆ ಅವನು ಬಿದ್ದಿದ್ದಾನೆ.
ಕನಸುಗಳೊಂದಿಗೆ ಒಡನಾಟ, ಬದುಕಿನ ಅರ್ಥದ ಹುಡುಕಾಟ ಜೊತೆಗೆ ವಾಸ್ತವ ಜಗತ್ತಿನ ಕಾಟ ಎಲ್ಲವೂ ಸೇರಿ ಅವನನ್ನು ಪೇಚಾಟಕ್ಕೆ ಸಿಲುಕಿಸಿದ್ದಿದೆ. ಇದು ಅತಿರೇಕಕ್ಕೆ ಹೋಗಿ ಒಮ್ಮೆ ಅವನು ಆತ್ಮಹತ್ಯೆಗೂ ಯತ್ನಿಸಿದ್ದ. ಮನೆಯಲ್ಲಿ ಯಾರೂ ಇಲ್ಲದ ದಿನ, ಕೀಟನಾಶಕ ಮಾರುವ ಅಂಗಡಿಗೆ ಹೋಗಿ ವಿಷ ತಂದು ಕುಡಿದು, ಸಾವಿನ ನಿರೀಕ್ಷೆಯಲ್ಲಿ ಒಂದು ರಾತ್ರಿ ಕಳೆದಿದ್ದ. ಅವನನ್ನು ಹೆತ್ತವರ ಅದೃಷ್ಟವೋ ಅಥವಾ ಅವನ ದುರಾದೃಷ್ಟವೋ? ಅವನು ಸಾಯಲಿಲ್ಲ. ಸಾಯುವುದು ಪಕ್ಕಕ್ಕಿರಲಿ, ಆ ವಿಷ ಕುಡಿದ ಮೇಲೂ ಅವನ ದೇಹ ಕಮಕ್ಕಿಮಕ್ ಅನ್ನಲಿಲ್ಲ. ಶುಂಠಿಗೆ ಸಿಂಪಡಿಸುವ ಕೀಟನಾಶಕವನ್ನು ಅವನು ಸೇವಿಸಿದ್ದ. ಸಾವಿನ ನಿರೀಕ್ಷೆಯಲ್ಲಿ ರಾತ್ರಿ ದೂಡಿದವನಿಗೆ ಮಾರನೇ ದಿನದ ಮುಂಜಾನೆ ಅಸಹನೀಯವೆನಿಸಿ, ಸಾವಿಗೆ ಹೊಸ ದಾರಿ ಅರಸಲು ಹೊರಡುವ ಹೊತ್ತಿಗೆ ಮನಸ್ಸು ಎಂದೂ ಸಾಗದ ಕನಸಿನ ಹಾದಿ ಹಿಡಿದಿತ್ತು. ಸಾಯುವ ತಿಕ್ಕಲುತನ ತಾನೇ ತಾನಾಗಿ ದೂರ ಸರಿಯಿತು.
ಎಲ್ಲರೂ ವಾಸ್ತವದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿರುವಾಗ ತಾನೊಬ್ಬ ಮಾತ್ರ ವಾಸ್ತವದ ವೈರತ್ವ ಕಟ್ಟಿಕೊಳ್ಳಲು ಹೊರಟಿರುವುದು ಸರಿಯೇ? ಈ ಗೊಂದಲ ಅವನನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಬದುಕು ಗೊಂದಲದ ಗೂಡು, ಬರಡಾಗಿ ಮತ್ತೆ ಹಸಿರು ಪೂಸಿಕೊಳ್ಳುವ ಕಾಡು, ತನ್ನಷ್ಟಕ್ಕೆ ತಾನೆ ಅರಳುವ ಹಾಡು ಅನ್ನುವುದು ಈಗೀಗ ಅವನಿಗೆ ಅರ್ಥವಾಗುತ್ತಿದೆ. ಆದರೂ ಕನಸಿನೊಂದಿಗಿನ ಒಡನಾಟ, ಬದುಕಿನ ಅರ್ಥದ ಹುಡುಕಾಟ ಮುಂದುವರಿದಿದೆ.
-ಎಚ್.ಕೆ. ಶರತ್
khullamkhullabevubella@gmail.com
'ಹ್ಯಾಗೆ ಬರೆಯೋದು?', 'ನಾವ್ ಬರೆದಿದ್ದನ್ನ ಪ್ರಕಟಿಸ್ತಾರಾ?' ಎಂಬ ಆತಂಕ ಬದಿಗಿಟ್ಟು ನಿಮ್ಮ ಮೊದಲ ಬರಹಗಳನ್ನು ನಮಗೆ ಕಳುಹಿಸಿ. 'ಇದೇ ಮೊದಲ ಬಾರಿಗೆ ನನ್ನ ಬರಹ ಪ್ರಕಟವಾಗಿದೆ' ಎಂಬ ಖುಷಿ ನಿಮ್ಮದಾದರೆ ಸಾಕು. ತೊದಲು ಬರಹಗಳಿಗೇ ಇರುವ ಅಂಕಣ ಇದು, 'ಮೊದಲ ಖುಷಿ'. ನೀವೂ khushimag@gmail.com ನಮ್ಮ ಅಂಚೆ ವಿಳಾಸ: ಕನ್ನಡಪ್ರಭ, 'ಮೊದಲ ಖುಷಿ' ವಿಭಾಗ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-01
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


