ಖುಷಿ

ಮೇಘಾಲಯದ ಉಸಿರಾಡುವ ಸೇತುವೆ

ಮೇಘಾಲಯದ ಉಸಿರಾಡುವ ಸೇತುವೆ
Published On :

ನದಿಯ ಈಚೆಗಿನ ಮರದ ಬೇರುಗಳನ್ನು ಆಚೆಗಿನ ಮರದ ಬೇರುಗಳೊಡನೆ ಗಂಟು ಹಾಕಿ ಹೆಣೆದು ನದಿ ದಾಟಲು ಅನುವಾಗುವಂತೆ ಮಾಡಿಕೊಂಡಿರುವ ಅವರ ಕಾರ್ಯಸಾಧನೆ ಮೆಚ್ಚಲರ್ಹ...

ಮೇಘಾಲಯಕ್ಕೆ ಹೋಗುವುದೆಂದು ನಿರ್ಧಾರವಾದ ಮೇಲೆ ಅಲ್ಲಿದ್ದ ಉಸಿರಾಡುವ ಜೀವಂತ ಸೇತುವೆಯನ್ನು ನೋಡಿಯೇ ಬರಬೇಕೆಂದುಕೊಂಡೆವು. ಬೆಳ್ಳಂಬೆಳ್ಳಗೆ ಶಿಲ್ಲಾಂಗ್‌ನಿಂದ ಹೊರಟು ಮಧ್ಯಾಹ್ನದ ಹೊತ್ತಿಗೆ ರಿವಾಯ್ ಹಳ್ಳಿ ತಲುಪಿದೆವು. ದಾರಿಯುದ್ದಕ್ಕೂ ಎಲ್ಲೆಡೆ ಥರಾವರಿ ಹಸಿರು ಮರಗಳು, ಹಾವುಗಳನ್ನು ಹೋಲುವ ವಿವಿಧ ಬಳ್ಳಿಗಳು, ಕೆಲವು ಸಣ್ಣ, ಕೆಲವು ದೊಡ್ಡ ಅತ್ಯಾಕರ್ಷಕ ಹೂವುಗಳು... ಒಂದೆಡೆ ರಸ್ತೆಗಂಟಿದ ಬೆಟ್ಟಗುಡ್ಡಗಳು, ಇನ್ನೊಂದೆಡೆ ತಳವೂ ಕಾಣದ ಮೈಜುಮ್ಮೆನಿಸುವ ಆಳವಾದ ಕಣಿವೆಗಳು ನಮ್ಮನ್ನು ಮಂತ್ರಮುಗ್ಧವಾಗಿಸಿದವು. ಸುತ್ತಲೂ ಇದ್ದ ವನಸಿರಿ ನಮ್ಮ ಆಯಾಸಕ್ಕೆ ತಂಪನ್ನೆರೆಯುತ್ತಿತ್ತು.
ರಿವಾಯ್ ತಲುಪುತ್ತಿದ್ದಂತೆಯೇ ಅಲ್ಲಿದ್ದ ಶಾಲೆ ಅಚ್ಚರಿಯಾಗಿ ಕಣ್ಣನ್ನಾವರಿಸಿತು. ಆ ಕಾನನದ ನಡುವೆಯೂ 1964ರಲ್ಲಿ ಶುರುವಾದ ಸರ್ಕಾರಿ ಶಾಲೆಯಿದೆ! ಮುಂಭಾಗದಲ್ಲಿ ಕುಳಿತಿದ್ದ ಯುವಕನೊಬ್ಬನಿಂದ ತಲಾ 10 ರುಪಾಯಿನ ಐದು ಟಿಕೇಟುಗಳನ್ನು ಕೊಂಡು ಸೇತುವೆಯನ್ನು ನೋಡಲು ಕಾಡಿನ ಕಾಲ್ದಾರಿ ಹಿಡಿದೆವು. ಹಳ್ಳಿಯಿಂದ ಸೇತುವೆ ಕಡೆಗೆ ಹೋಗುವ ಮೊದಲ ಕೆಲವು ಮೆಟ್ಟಿಲುಗಳು ಸಿಮೆಂಟಿನಲ್ಲಿದ್ದರೆ, ಕೆಳಗಿಳಿಯುತ್ತಿದ್ದಂತೆಯೇ ಕಲ್ಲಿನ ಮೆಟ್ಟಿಲುಗಳು ಕಂಡವು.
ಅಬ್ಬಾ! ನೆನೆದರೆ ಭಯ
ಎಲ್ಲಾ ಖಾಸಿ ಹಳ್ಳಿಗಳೂ 'ರಾಜಮಾರ್ಗ' ಎನ್ನುವ ಈ ಥರದ ಮೆಟ್ಟಿಲುಗಳಿಂದ ಬೆಸೆಯಲ್ಪಟ್ಟಿವೆ. ಈ ರಾಜ ಮಾರ್ಗವೇ ಅಲ್ಲಿನ ಪಾರಂಪರಿಕ ಅಡಕೆ ವ್ಯಾಪಾರವನ್ನು ಮೇಘಾಲಯದಲ್ಲಿ ಇನ್ನೂ ಜೀವಂತವಾಗಿಟ್ಟಿರುವುದು... ನೋಡಲು ಸುಂದರವಾಗಿ, ಒಪ್ಪ ಓರಣವಾಗಿ ಜೋಡಿಸಿರುವ ಈ ಪಾಚಿ ಕಟ್ಟಿದ ಮೆಟ್ಟಿಲುಗಳ ಮೇಲೆ ಮಳೆಗಾಲದಲ್ಲಿ ಹಳ್ಳಿಯ ಜನ ಹೇಗೆ ಓಡಾಡುತ್ತಾರೆನ್ನುವುದನ್ನು ನೆನಸಿಕೊಂಡರೇ ಭಯವಾಗುತ್ತೆ. ಕೆಳಗಿಳಿಯುತ್ತಾ ಹೋದಂತೆ ಕಾಡಿನ ದಟ್ಟತೆ ಮನವರಿಕೆಯಾಯಿತು.
ಪುಟ್ಟ ಝರಿಗಳ ರಮ್ಯತಾಣ
ಸುತ್ತಲೂ ನೆಲಕ್ಕೆ ಬಿಸಿಲು ತಾಗದಂತೆ ಚಾದರವೊದಗಿಸಿದ್ದ ದೊಡ್ಡ ಮರಗಳು, ಅವುಗಳನ್ನಪ್ಪಿದ ಬಳ್ಳಿಗಳು, ಅರಳಿದ್ದ ಹೂವುಗಳ ಮಕರಂದ ಹೀರಲು ಗುಂಪುಗಳಲ್ಲಿ ಗುಂಯ್ ಗುಡುತ್ತಿದ್ದ ಜೇನ್ನೊಣಗಳು, ಕೆಳಗೆ ಹರಿಯುತ್ತಿರುವ ನದಿಯ ಕಲರವ, ಮರಗಳ ಬೇರಿನ ಅಂಚಿನಿಂದ ಒಸರುತ್ತಿರುವ ಪುಟ್ಟ ಝರಿಗಳು ಆ ಪರಿಸರವನ್ನು ಇನ್ನೂ ಮೋಹಕಗೊಳಿಸಿದ್ದವು. ನಾವು ಹೋದ ಸಮಯದಲ್ಲಿ ನಮ್ಮನ್ನೂ ಸೇರಿ ಅಲ್ಲಿ ಹತ್ತು ಪ್ರವಾಸಿಗರೂ ಇಲ್ಲದಿದ್ದದ್ದು ಕಾಡಿನ ಅನುಭವವನ್ನು ಇನ್ನೂ ಗಾಢವಾಗಿಸಿತು. ಜುಳು ಜುಳು ನಿನಾದದೊಡನೆ ಹರಿಯುತ್ತಿರುವ ವಾಹ್ ಥಾಯ್ಲಾಂಗ್ ನದಿ, ಅದನ್ನು ದಾಟಲು ಬೇರುಗಳಿಂದ ನಿರ್ಮಿಸಿದ ಜೀವಂತ ತೂಗು ಸೇತುವೆ...
ನಾನು ಈ ಜೀವಂತ ಸೇತುವೆಯ ಬಗ್ಗೆ ಮೊದಲು ತಿಳಿದದ್ದು ಖಾಸಿ ಜನಾಂಗದವನೊಬ್ಬ ತನ್ನ ಪುಟ್ಟ ಮಗಳಿಗೆ ಮರದ ಬೇರುಗಳನ್ನು ಹೆಣೆದು ಹೇಗೆ ಸೇತುವೆಯನ್ನು ನಿರ್ಮಿಸುವುದು ಎನ್ನುವುದನ್ನು ಹೇಳಿಕೊಡುವುದರ ಮೇಲೆ ಮಾಡಿದ್ದ ಬಿಬಿಸಿಯ 'ಹ್ಯೂಮನ್ ಪ್ಲ್ಯಾನೆಟ್‌' ಎಂಬ ಡಾಕ್ಯುಮೆಂಟರಿಯಿಂದ. ಅಲ್ಲಿ ನೋಡಿದ್ದ ಸೇತುವೆಗೂ ಎದುರಿಗಿದ್ದ ಸೇತುವೆಗೂ ಬಹಳ ವ್ಯತ್ಯಾಸವೇನಿರಲಿಲ್ಲ. ಹಳ್ಳಿಗರ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕಾಯಿತು.
ದಡಕ್ಕಂಟಿದ ಬೇರು
ಫೈಕಸ್ ಎಲಾಸ್ಟಿಕಾ ಎನ್ನುವ ರಬ್ಬರ್ ಗಿಡಗಳನ್ನು ನದಿಯ ಎರಡೂ ಬದಿಯಲ್ಲಿ ನೆಡುವ ಖಾಸಿ, ಜೈಂತಿಯಾ ಮತ್ತು ಗಾರೋ ಜನಾಂಗದವರು ಪಕ್ಕದ ಹಳ್ಳಿಗಳನ್ನು ತಲುಪಲು ತಮ್ಮದೇ ಉಪಾಯವನ್ನು ನೂರಾರು ವರ್ಷಗಳ ಹಿಂದೆಯೇ ಕಂಡುಕೊಂಡರು. ಬಹಳ ವೇಗವಾಗಿ ಬೆಳೆಯುವ ಈ ಮರದ ವಿಶೇಷತೆಯೆಂದರೆ, ಮರದ ಎಲ್ಲ ಭಾಗಗಳಿಂದಲೂ ಹೊರಬರುವ ಬಲಿಷ್ಠ ಬೇರುಗಳು. ಮೊದಲಿಗೆ ಬಿದರಿನ ಕೋಲುಗಳನ್ನೋ ಅಥವಾ ಅಡಕೆ ಮರಗಳನ್ನೋ ನದಿಯ ಎರಡೂ ಬದಿಗಳಿಗೆ ಸೇತುವೆಯ ಹಾಗೆ ಇಟ್ಟು ಬೇರುಗಳು ಅವುಗಳ ಮೇಲೆ ಆಚೆಗಿನ ದಡ ಸೇರುವ ಹಾಗೆ ಮಾಡುತ್ತಾರೆ. ಬಿದರಿನ ಕೋಲಿನೊಳಗೆ ಬೆಳೆದ ಬೇರುಗಳು ನೇರವಾಗಿ ಆಚೆಗಿನ ದಡ ಸೇರಿ ಅಲ್ಲಿನ ಮಣ್ಣಿಗೆ ಅಂಟಿ ಮತ್ತಷ್ಟು ಬಲವಾಗುತ್ತವೆ.
ನದಿಯ ಈಚೆಗಿನ ಮರದ ಬೇರುಗಳನ್ನು ಆಚೆಗಿನ ಮರದ ಬೇರುಗಳೊಡನೆ ಗಂಟು ಹಾಕಿ ಹೆಣೆದು ನದಿ ದಾಟಲು ಅನುವಾಗುವಂತೆ ಮಾಡಿಕೊಂಡಿರುವ ಅವರ ಕಾರ್ಯಸಾಧನೆ ಮೆಚ್ಚಲರ್ಹ. ವರ್ಷಗಳು ಕಳೆದಂತೆ ಹೆಣೆದ ಬೇರುಗಳು ಇನ್ನೂ ಬಲಿತು, ದೊಡ್ದವಾಗಿ, ಬಲಿಷ್ಠವಾಗುತ್ತವೆ, ನೂರಾರು ಹಳ್ಳಿಗರನ್ನು ಮಳೆಗಾಲದಲ್ಲಿ ಸುರಕ್ಷಿತವಾಗಿ ದಡ ಸೇರಿಸುತ್ತವೆ. ಆ ಬೇರುಗಳ ನಡುವೆ ವರ್ಷಗಳು ಕಳೆದ ಹಾಗೆ ಕಲ್ಲುಗಳನ್ನು ಇರಿಸಿ ಹಳ್ಳಿಗರು ನಡೆದಾಡಲು ಅನುಕೂಲವಾಗುವಂತೆ ಮಾಡಿದ್ದಾರೆ. ಅಲ್ಲಿನ ಅಘೋಷಿತ ಶಾಸನವೇನೋ ಎಂಬಂತೆ ಹೊಸ ಬೇರೇನಾದರೂ ಹಳ್ಳಿಗನ ಕಣ್ಣಿಗೆ ಬಿದ್ದರೆ ಅದನ್ನು ಗಂಟು ಹಾಕಿ ಹೆಣೆದು ಸೇತುವೆಗೆ ಕಟ್ಟಿಬಿಡುತ್ತಾನೆ!
ಅಡಕೆಗಾಗಿ ಎಲ್ಲ...
ಒಬ್ಬ ಮಹಿಳೆ ಅಥವಾ ಪುರುಷ 40-50 ಕೆ.ಜಿ. ಅಡಕೆ ಹೊತ್ತು ಸೇತುವೆಯ ಮೇಲೆ ನಡೆಯುವಾಗ ಆಯಾ ತಪ್ಪಿ ನದಿಗೆ ಬೀಳದಂತೆ ಹಿಡಿದುಕೊಳ್ಳಲೂ ಬೇರುಗಳನ್ನೇ ಬಳಸಿ ಹಿಡಿಕೆಯನ್ನು ಹೆಣೆದಿದ್ದಾರೆ. ನಾವು ಕಂಡ ಸೇತುವೆ ರಿವಾಯ್ ಮತ್ತು ನೋಹ್ವೆಟ್ ಹಳ್ಳಿಗಳನ್ನು ಬೆಸೆದಿರುವ ಜಿಂಗ್ಕಿಯಾಂಗ್ ಝ್ರೀ. ಅಡಕೆ ವ್ಯಾಪಾರಕ್ಕೆಂದು ರಿವಾಯ್‌ಗೆ ಬರುವ ಖಾಸಿ ಮಹಿಳೆಯರು ವಾಹ್ ಥಾಯ್ಲಾಂಗ್ ನದಿಗೆ ಕಟ್ಟಿರುವ ಈ ಸೇತುವೆಯನ್ನು ದಾಟಿ ಬರುತ್ತಾರೆ. ವಾಹ್ ಥಾಯ್ಲಾಂಗ್ ನದಿಗೆ ಕಟ್ಟಿರುವ ಸೇತುವೆಯ ಬೇರುಗಳು ಕನಿಷ್ಠವೆಂದರೂ 18 ಇಂಚು ಅಗಲ ಮತ್ತು 6 ಇಂಚು ದಪ್ಪ ಇವೆ.
ತಲೆತಗ್ಗಿಸಿದ ಆಧುನಿಕತೆ
ಮೇಘಾಲಯದ ಜನರು ತಮ್ಮ ಹಳ್ಳಿಗಳನ್ನು ಬೆಸೆಯಲು ಸರ್ಕಾರದ ನೆರವನ್ನು ಕಾಯುತ್ತಾ ನಿಲ್ಲುವುದಿಲ್ಲ. ಮರಗಳನ್ನು ನೆಟ್ಟು ತಮ್ಮ ಸೇತುವೆ ತಾವೇ ನಿರ್ಮಿಸಿಕೊಳ್ಳುತ್ತಾರೆ. ಇದು ಮಾತ್ರವಲ್ಲ, ಅವರಲ್ಲಿ ಮರ ಹತ್ತಲು ಬಳಸುವ ಏಣಿಗಳೂ ಜೀವಂತ ಬೇರುಗಳೇ! ಅಚ್ಚರಿಯೆಂದರೆ ಉಮ್ಶಿಯಾಂಗ್‌ನಲ್ಲಿ ಡಬಲ್ ಡೆಕ್ಕರ್ ಸೇತುವೆಯಿದೆ; ಒಂದರ ಮೇಲೊಂದು 2 ಸೇತುವೆಗಳಿರುವ ಇಂಥ ಸೇತುವೆ ವಿಶ್ವದಲ್ಲಿ ಬೇರೆಲ್ಲೂ ಇಲ್ಲ. ಅದೇನೇ ಇರಲಿ, ಕನಿಷ್ಠವೆಂದರೂ 150 ವರ್ಷ ಬದುಕುವ ಬೇರುಗಳ ಈ ಜೀವಂತ ಸೇತುವೆ ಆಧುನಿಕ ತಂತ್ರಜ್ಞಾನಕ್ಕೆ ದೊಡ್ಡ ಸವಾಲೇ ಸರಿ!



= ಚೈತ್ರಾ ಅರ್ಜುನಪುರಿ
carjunp@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.