ಪ್ರಯಾಣಿಕ ಪಾರು: ಸಾಗಣೆ ಏರು!
ರೈಲು ಪ್ರಯಾಣ ದರ ಹೆಚ್ಚಿಸದಿದ್ದರೂ ಸರಕು ಸಾಗಣೆ ಮೇಲಿನ ದರವನ್ನು ಶೇ.8ರವರೆಗೂ ಹೆಚ್ಚಿಸಲಾಗಿದೆ. ವಿಶೇಷವಾಗಿ ಡೀಸೆಲ್ ಮತ್ತು ಅಡುಗೆ ಇಂಧನ ಸಾಗಣೆ ಮೇಲಿನ ದರವನ್ನು ಏರಿಸಲಾಗಿದೆ. ಇದರಿಂದ ಸಹಜವಾಗಿಯೇ ಚಿಲ್ಲರೆ ಇಂಧನ ಮಾರಾಟ ದರ ಹೆಚ್ಚಳವಾಗಲಿದ್ದು, ಶ್ರೀಸಾಮಾನ್ಯರಿಗೆ ತೊಂದರೆ ತಪ್ಪಿದ್ದಲ್ಲ.
ಡೀಸೆಲ್ ಸಾಗಣೆ ಮೇಲಿನ ದರವನ್ನು ಶೇ.5.79ರಷ್ಟು ಹೆಚ್ಚಿಸಲಾಗಿದೆ. ಹಾಗಾಗಿ, ಪ್ರತಿ ಟನ್ಗೆ 984.80ರಷ್ಟಿದ್ದ ದರ ಇನ್ನು ಮುಂದೆ 1041.80ಕ್ಕೆ ಏರಿಕೆಯಾಗಲಿದೆ. ಅದೇ ರೀತಿ ಸೀಮೆ ಎಣ್ಣೆ ಸಾಗಣೆ ದರ ಕೂಡಾ ಶೇ.5.79ರಷ್ಟು ಏರಿಕೆಯಾಗಲಿದ್ದು, ಪ್ರತಿ ಟನ್ಗೆ 937.60ರಷ್ಟಾಗಲಿದೆ. ಅಡುಗೆ ಇಂಧನ ಎಲ್ಪಿಜಿ ಸಾಗಣೆ ದರ ಕೂಡಾ ಶೇ.5.79ರಷ್ಟು ಹೆಚ್ಚಾಗಲಿದ್ದು ಪ್ರತಿ ಟನ್ಗೆ 937.60ರಷ್ಟಾಗಲಿದೆ. ಆದರೆ, ಇದರಲ್ಲಿ ಅಭಿವೃದ್ಧಿ ಶುಲ್ಕ ಮತ್ತು ಬ್ಯೂಸಿ ಸೀಸನ್ ಶುಲ್ಕ ಸೇರಿಲ್ಲ.
ಶೇಂಗಾ ಎಣ್ಣೆ ಸಾಗಣೆ ತುಟ್ಟಿ: ಡೀಸೆಲ್, ಅಡುಗೆ ಇಂಧನ ಸಾಗಣೆ ದರ ಹೆಚ್ಚಿಸಿದಂತೆ, ಧಾನ್ಯ, ದ್ವಿದಳ ಧಾನ್ಯ, ಶೇಂಗಾ ಎಣ್ಣೆ ಸಾಗಣೆ ಮೂಲ ದರವನ್ನು ಕೂಡಾ ಶೇ.5.8ರಷ್ಟು ಹೆಚ್ಚಿಸಲಾಗಿದೆ. ಇದು ಸರ್ಕಾರದ ಫರ್ಟಿಲೈಸರ್ ಸಬ್ಸಿಡಿ ಮೇಲೆ ಪರಿಣಾಮ ಬೀರಲಿದೆ.
ಧಾನ್ಯ ಮತ್ತು ದ್ವಿದಳ ಧಾನ್ಯಗಳ ಪ್ರತಿ ಟನ್ಗೆ ಸಾಗಣೆ ದರ 1326.08ರಷ್ಟಿದ್ದದ್ದು ಇನ್ನು 1,403.6ಕ್ಕೆ ತಲುಪಲಿದೆ. ಅದೇ ರೀತಿ ಶೇಂಗಾ ಎಣ್ಣೆ ಸಾಗಣೆ ಪ್ರತಿ ಟನ್ಗೆ 1746.60 ಇದ್ದದ್ದು 1848ಕ್ಕೆ ಏರಿಕೆಯಾಗಲಿದೆ. ಯೂರಿಯಾ ಸಾಗಣೆ ದರ ಹೆಚ್ಚಳವಾದರೆ, ಈಗಿರುವ ಪ್ರತಿ ಟನ್ಗೆ 869.60 ದರ 920ಕ್ಕೆ ತಲುಪಲಿದೆ ಎಂದು ಬನ್ಸಲ್ ಹೇಳಿದ್ದಾರೆ.
ಇದೇ ವೇಳೆ, ಇಂಧನ ಹೊಂದಾಣಿಕೆ ಘಟಕ(ಎಫ್ಎಸಿ) ಅಳವಡಿಸಿಕೊಳ್ಳುವ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಕಾರ್ಖಾನೆಗಳತ್ತ ಕಣ್ಣು...
ಹೆಚ್ಚುತ್ತಿರುವ ರೇಲ್ವೆ ಬೇಡಿಕೆ, ಆಮದಿನ ಮೇಲೆ ಮತ್ತೊಬ್ಬರ ಮೇಲಿನ ಅವಲಂಬನೆಯನ್ನು ತಪ್ಪಿಸಲು ಹಾಗೂ ಉದ್ಯೋಗ ಸೃಷ್ಟಿಯನ್ನು ಗಮನದಲ್ಲಿರಿಸಿಕೊಂಡು, ಈ ಬಾರಿಯ ಬಜೆಟ್ನಲ್ಲಿ ಉತ್ಪಾದನೆ/ನಿರ್ವಹಣಾ ಸೌಲಭ್ಯದ ಕೆಲವು ಪ್ರಸ್ತಾವನೆಗಳನ್ನು ಮಾಡಲಾಗಿದೆ.
ರಾಯ್ಬರೇಲಿಯಲ್ಲಿ ಹೊಸ ಗಾಲಿ ಕಾರ್ಖಾನೆಯನ್ನು ಸ್ಥಾಪಿಸಲು ಈಗಾಗಲೇ ಆರ್ಐಎನ್ಎಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಬಿಎಚ್ಇಎಲ್-ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಜಸ್ಥಾನದ ಭಿಲ್ವಾರಾದಲ್ಲಿ ಗ್ರೀನ್ಫೀಲ್ಡ್ ಮೆಮು ತಯಾರಿಕಾ ಘಟಕ ಸ್ಥಾಪಿಸಲು ಪ್ರಸ್ತಾವ
ಹರ್ಯಾಣ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸೋನೆಪತ್ ಜಿಲ್ಲೆಯಲ್ಲಿ ಕೋಚ್ ತಯಾರಿಕಾ ಘಟಕದ ಭರವಸೆ ನೀಡಲಾಗಿದೆ.
ಬಿಕಾನೇರ್ ಮತ್ತು ಪ್ರತಾಪ್ಗಡ್ನ ಕಾರ್ಯಾಗಾರಗಳನ್ನು ನಿರ್ದಿಷ್ಟ ಬಿಜಿ ವ್ಯಾಗನ್ನ ಪಿಒಎಚ್ (ತುರ್ತು ಸಂದರ್ಭದಲ್ಲಿ ರೈಲು ಎಂಜಿನ್, ಬೋಗಿಯ ಯಂತ್ರಭಾಗಗಳನ್ನು ಪೂರ್ಣ ಪ್ರಮಾಣದಲ್ಲಿ ಕಳಚಿ ಮರು ಜೋಡಣೆ ಮಾಡುವುದು) ಅಡಿ ಪರಿವರ್ತನೆ ಮಾಡಲು ಪ್ರಸ್ತಾಪಿಸಲಾಗಿದೆ.
ರಿಪೇರಿ ಮತ್ತು ಯಾಂತ್ರಿಕ ಬೋಗಿಯ ಕಾರ್ಯಾಗಾರವನ್ನು ಮಧ್ಯಪ್ರದೇಶದ ಮಿಸ್ರೋದ್ದಲ್ಲಿ ಸ್ಥಾಪಿಸುವ ಪ್ರಸ್ತಾಪವಿದೆ.
ಒಡಿಶಾದ ಕಾಲಾಹಂಡಿ ಜಿಲ್ಲೆಯಲ್ಲಿ ವ್ಯಾಗನ್ ನಿರ್ವಹಣಾ ಕಾರ್ಯಾಗಾರದ ನೂತನ ಘಟಕವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ (ಪಿಪಿಪಿ) ಚಂಡೀಗಡದಲ್ಲಿ ಆಧುನಿಕ ಸಿಗ್ನಲ್ ಉಪಕರಣಗಳ ಸೌಲಭ್ಯ ಕೇಂದ್ರ ಸ್ಥಾಪನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

