

ನವದೆಹಲಿ: ನಾನು ಹಿಂದು ಮತ್ತು ಮುಸ್ಲಿಂ ಜಾತಿಗೆ ಸೇರಿದವನು ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಬುಧವಾರ ಹೇಳಿದ್ದಾರೆ.
ಕೃಷ್ಣ ಮೃಗ ಬೇಟೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಸಂಬಂಧ ಇಂದು ಜೋಧ್ ಪುರ ನ್ಯಾಯಾಲಕ್ಕೆ ಹಾಜರಾಗಿದ್ದ ಸಲ್ಮಾನ ಖಾನ್ ಅವರು ವಿಚಾರಣೆ ವೇಳೆ ತಾವು ಯಾವ ಜಾತಿಗೆ ಸೇರಿದವರು ಎಂಬ ನ್ಯಾಯಾಲಯದ ಪ್ರಶ್ನೆಗೆ ಕೆಲಕಾಲ ಯೋಚಿಸಿ ನಾನು ಹಿಂದು ಮತ್ತು ಮುಸ್ಲಿಂ ಜಾತಿಗೆ ಸೇರಿದವನು ಎಂದು ಉತ್ತರಿಸಿದ್ದಾರೆ.
ಕಳೆದ ಗುರುವಾರ ಅನಾರೋಗ್ಯದ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಅವರು ನ್ಯಾಯಾಲಯಕ್ಕೆ ಗೈರಾಗಿದ್ದರು. ಅನಾರೋಗ್ಯ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿ ಮಾಡಿದ್ದರು.
ಈ ಸಂಬಂಧ ಸಲ್ಲು ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಅನುಪಮಾ ಬಿಜ್ಲಾನಿ ಅವರು ಸ್ವೀಕರಿಸಿದ್ದು ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದ್ದರು.ಕೋರ್ಟ್ ಆದೇಶದಂತೆ ಇಂದು ಸಲ್ಮಾನ್ ಖಾನ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸಲ್ಲು ಅವರ ಹೇಳಿಕೆ ಪಡೆಯುವ ಸಲುವಾಗಿ ಅನುಪಮಾ ಬಿಜ್ಲಾನಿ ಅವರು ಸಲ್ಮಾನ್ ಅವರ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸಲ್ಮಾನ್ ಅವರ ತಂದೆ, ತಾಯಿ, ವೃತ್ತಿಜೀವನ ಕೇಳಿದಾಗ ಎಲ್ಲ ಪ್ರಶ್ನೆಗಳಿಗೆ ಸಲ್ಮಾನ್ ಖಾನ್ ಸರಾಗವಾಗಿ ಉತ್ತರ ಹೇಳುತ್ತಿದ್ದರು. ನಂತರ ಜಾತಿ ಪ್ರಶ್ನೆ ಕೇಳಿದಾಗ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದ ಸಲ್ಮಾನ್ ಕೆಲ ಕಾಲ ಆಲೋಚನೆಯಲ್ಲಿ ಮಗ್ನರಾಗಿ ನನಗೆ ಯಾವ ಧರ್ಮವೂ ಇಲ್ಲ. ನಾನು ಹಿಂದು ಮತ್ತು ಮುಸ್ಲಿಂ ಎರಡೂ ಧರ್ಮಕ್ಕೆ ಸೇರಿದವನು ಎಂದು ಉತ್ತರಿಸಿದ್ದಾರೆ.