

ನವದೆಹಲಿ: ಆಂತರಿಕ ಹಿಂಸಾಚಾರ ಪೀಡಿತ ಇರಾಕ್ ನಲ್ಲಿ ಮೊಸುಲ್ ನಗರವನ್ನು ವಶಪಡಿಸಿಕೊಂಡಿರುವ ಇಸಿಸ್ ಉಗ್ರರು ಮತ್ತಷ್ಟು ಬಲಗೊಂಡಿದ್ದು, ತಮ್ಮ ಸಂಘಟನೆಯನ್ನು ವಿದೇಶಗಳಲ್ಲಿಯೂ ವಿಸ್ತರಿಸಲು ಮುಂದಾಗಿರುವುದು ಭಾರತಕ್ಕೆ ಆತಂಕಕಾರಿ ಎಂದು ಭಾರತೀಯ ಗುಪ್ತಚರ ಇಲಾಖೆ ರಾ ಹೇಳಿದೆ.
ಮೂಲಗಳ ಪ್ರಕಾರ ರಾ (Research and Analysis Wing) ಈ ಕುರಿತು ಪ್ರಧಾನಿ ಮಂತ್ರಿಗಳ ಕಚೇರಿಗೆ ವರದಿ ನೀಡಿದ್ದು, ಆಫ್ಘಾನಿಸ್ತಾನದಲ್ಲಿ ಇಸಿಸ್ ಚಟುವಟಿಕೆ ಭಾರತದ ಸುರಕ್ಷತೆಯ ದೃಷ್ಟಿಯಿಂದ ಆತಂಕಕಾರಿ ಎಂದು ಹೇಳಿದೆ. ಆಫ್ಘಾನಿಸ್ತಾನದಲ್ಲಿ ಇಸಿಸ್ ದಿನೇ ದಿನೇ ಬೆಳೆಯುತ್ತಿದ್ದು, ಇದು ನಂತರ ಪಾಕಿಸ್ತಾನ, ಬಳಿಕ ಭಾರತದ ಗಡಿಗೂ ಬಂದರೂ ಅಚ್ಚರಿ ಇಲ್ಲ ಎಂದು ರಾ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಇರಾಕ್ ನಲ್ಲಿ ತನ್ನ ಕದಂಬ ಬಾಹು ಚಾಚಿರುವ ಉಗ್ರ ಸಂಘಟನೆ ಇಸಿಸ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಬೀರಲು ಹೊರಟಿದೆ. ಇದರ ಮೊದಲ ಹಂತವಾಗಿ ಆಫ್ಘಾನಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗೆ ಇಸಿಸ್ ಈಗಾಗಲೇ ಚಾಲನೆ ನೀಡಿದೆ. ಆತಂಕಕಾರಿ ವಿಚಾರವೆಂದರೆ ಆಫ್ಘಾನಿಸ್ತಾನದ ಕೆಲ ಬುಡಕಟ್ಟು ಉಗ್ರ ಸಂಘಟನೆಗಳು ಇಸಿಸ್ ಗೆ ಬೆಂಬಲ ನೀಡುತ್ತಿವೆ. ಸ್ಥಳೀಯ ಉಗ್ರ ಸಂಘಟನೆಗಳ ಬೆಂಬಲ ಪಡೆದ ಇಸಿಸ್ ಆ ದೇಶದಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಹವಣಿಸುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆಫ್ಘಾನಿಸ್ತಾನದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಇದಕ್ಕೆ ಪ್ರಮುಖ ನಿದರ್ಶನವಾಗಿದ್ದು, ಈ ಬಾಂಬ್ ದಾಳಿಯನ್ನು ನಡೆಸಿದ್ದೇ ಇಸಿಸ್ ಎಂದು ಹೇಳಲಾಗುತ್ತಿದೆ.
ಹೀಗಾಗಿ ಇಸಿಸ್ ಇದೀಗ ಕ್ರಮೇಣ ಆಫ್ಘಾನಿಸ್ತಾನದಲ್ಲಿ ಕಾಲಿಟ್ಟಿದ್ದು, ಬಳಿಕ ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿ ಭಾರತದಲ್ಲಿಯೂ ತನ್ನ ಉಗ್ರ ದಾಳಿ ನಡೆಸುವ ಹುನ್ನಾರ ನಡೆಸಿದೆ. ಈಗಾಗಲೇ ಆಲ್ ಖೈದಾ ಮತ್ತು ಕೆಲ ತಾಲಿಬಾನ್ ಉಗ್ರ ಸಂಘಟನೆಗಳು ಬಹಿರಂಗವಾಗಿ ಇಸಿಸ್ ಗೆ ಬೆಂಬಲ ಘೋಷಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಗೊಳಿಸಿದೆ.
ಇನ್ನು ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿರುವ ಭಾರತ ಸರ್ಕಾರ, ಈಗಾಗಲೇ ಈ ಬಗ್ಗೆ ಆಫ್ಘಾನಿಸ್ತಾನ ಪ್ರಧಾನಿ ಅಶ್ರಫ್ ಘನಿ ಅವರೊಂದಿಗೆ 2 ಸುತ್ತಿನ ಮಾತುಕತೆ ನಡೆಸಿದೆ. ಅಲ್ಲದೆ ಘನಿ ಅವರ ಭಾರತ ಪ್ರವಾಸದ ವೇಳೆಯಲ್ಲಿಯೂ ಈ ವಿಚಾರವನ್ನು ಚರ್ಚಿಸಲು ನಿರ್ಧರಿಸಿದೆ.