

ನವದೆಹಲಿ: ನೇಪಾಳದಲ್ಲಿ 4 ತಿಂಗಳ ಹಿಂದೆ ಜಾರಿಗೆ ಬಂದಿರುವ ಸಂವಿಧಾನದಲ್ಲಿ ಮದೇಶಿ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡರೆ ಭಾರತಕ್ಕೆ ಗಂಭೀರ ಅಪಾಯ ಎದುರಾಗಲಿದೆ ಎಂದು ನೇಪಾಳದ ಹಿರಿಯ ಮದೇಶಿ ನಾಯಕ ಎಚ್ಚರಿಸಿದ್ದಾರೆ.
ನೇಪಾಳದ ಹೊಸ ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕು ಹಾಗೂ ಮದೇಶಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪ್ರಾರಂಭವಾಗಿದ್ದ ಪ್ರತಿಭಟನೆ ನಾಲ್ಕು ತಿಂಗಳಾದರೂ ಮುಂದುವರೆದಿದೆ. " ನಮ್ಮ ಹೋರಾಟ ಈ ವರೆಗೂ ತೀವ್ರ ಸ್ವರೂಪ ಪಡೆದುಕೊಂಡಿಲ್ಲ, ತೀವ್ರ ಸ್ವರೂಪ ಪಡೆದುಕೊಂಡರೆ ಭಾರತಕ್ಕೆ ಅಪಾಯ ಎದುರಾಗಲಿದ್ದು ನೇಪಾಳದ ಟೆರೈ ಪ್ರದೇಶದಲ್ಲಿರುವ ಭಾರತ ವಿರೋಧಿ ಅಂಶಗಳ ಬಗ್ಗೆ ಭಾರತ ಎಚ್ಚರ ವಹಿಸಬೇಕಿದೆ ಎಂದು ರಾಜೇಂದ್ರ ಮಹ್ತೋ ಎಚ್ಚರಿಸಿದ್ದಾರೆ.
ಭಾರತ ನೇಪಾಳದೊಂದಿಗೆ ಸುಮಾರು 1 ,100 ಕಿ.ಮಿ ಯಷ್ಟು ಗಡಿ ಪ್ರದೇಶವನ್ನು ಹೊಂದಿದ್ದು, ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ನೇಪಾಳದೊಂದಿಗೆ ಗಡಿ ಹಂಚಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮದೇಶಿ ಸಮುದಾಯದ ಪ್ರತಿಭಟನೆ ತೀವ್ರಗೊಂಡರೆ ಭಾರತಕ್ಕೆ ಅಪಾಯ ಎದುರಾಗಲಿದೆ ಎಂದು ರಾಜೇಂದ್ರ ಮಹ್ತೋ ಎಚ್ಚರಿಕೆ ನೀಡಿದ್ದಾರೆ.