

ಗುಂಟೂರು: ವಿವಾಹೇತರ ಅಕ್ರಮ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದ ಗೃಹಿಣಿಯನ್ನು ದೂರ್ತ ಪ್ರಿಯಕರನೋರ್ವ ಸಜೀವವಾಗಿ ದಹಿಸಲು ಯತ್ನಿಸಿದ ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮುನಗಪಾಡು ಗ್ರಾಮದ ನಿವಾಸಿಯಾಗಿರುವ ಮಹಿಳೆ ಅದೇ ಗ್ರಾಮದ ಸೈಯ್ಯದ್ ಆದಂ ಶಫಿ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಗ್ರಾಮಸ್ಥರಿಗೆ ತಿಳಿದು ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಬಳಿಕ ಕೆಲಕಾಲ ಮಹಿಳೆಯಿಂದ ದೂರವಿದ್ದ ಪ್ರಿಯಕರ ಶಫಿ ಮತ್ತೆ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾನೆ ಈ ವೇಳೆ ಮಹಿಳೆ ಅಕ್ರಮ ಸಂಬಂಧವನ್ನು ಮುಂದುವರೆಸುವುದು ಬೇಡ.. ಆಗಿದ್ದೇನೋ ಆಗಿ ಹೋಗಿದೆ. ಮತ್ತೇ ಅದೇ ತಪ್ಪನ್ನು ಮುಂದುವರೆಸುವುದು ಬೇಡ ಎಂದು ಹೇಳಿದ್ದಾಳೆ.
ಮಹಿಳೆಯ ಓಲೈಕೆಗೆ ಬಗ್ಗದ ಪ್ರಿಯಕರ ಶಫಿ ಮಹಿಳೆ ವಿರುದ್ಧ ಆಕ್ರೋಶಗೊಂಡು, ಭಾನುವಾರ ಮುಂಜಾನೆ ಮಹಿಳೆ ಬಹಿರ್ದೆಸೆಗೆಂದು ಹೊರ ಬಂದಾಗ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಂಡಿದ್ದು, ಸುತ್ತಮುತ್ತಲ್ಲಿದ್ದ ಜನ ಬೆಂಕಿಯನ್ನು ನಂದಿಸಿದ್ದಾರೆ. ಭಾಗಶಃ ಸುಟ್ಟುಹೋಗಿರುವ ಮಹಿಳೆ ಪ್ರಸ್ತುತ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಪ್ರಿಯಕರ ಶಫಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.