

ನವದೆಹಲಿ: 2025 ರ ವೇಳೆಗೆ ಭಾರತಕ್ಕೆ ನೀರಿನ ಕೊರತೆ ಉಂಟಾಗಲಿದೆ ಎಂದು ಸರ್ಕಾರ ಸಂಸತ್ ಗೆ ತಿಳಿಸಿದೆ.
ನೀರಿನ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹಾ ಸಂಸ್ಥೆಯೊಂದರ ಅಧ್ಯಯನ ವರದಿಯನ್ನು ಉಲ್ಲೇಖಿಸಿರುವ ಭಾರತ ಸರ್ಕಾರ, 2025 ರ ವೇಳೆಗೆ ಭಾರತದಲ್ಲಿ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚಲಿದ್ದು, ಇರುವ ಸಂಪನ್ಮೂಲಗಳು ಸಾಲದೇ ನೀರಿನ ಅಭಾವ ಎದುರಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಸನ್ವಾರ್ ಲಾಲ್ ಜಾಟ್ ಎವ್ರಿಥಿಂಗ್ ಅಬೌಟ್ ವಾಟರ್ ಎಂಬ ಸಲಹಾ ಸಂಸ್ಥೆ ಅಧ್ಯಯನ ನಡೆಸಿದ್ದು 2025 ರ ವೇಳೆಗೆ ಭಾರತದಲ್ಲಿ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚದೆ ಎಂದು ತಿಳಿಸಿದೆ ಎಂದು ಹೇಳಿದ್ದಾರೆ. ಕೇಂದ್ರ ಜಲ ಆಯೋಗ ನಡೆಸಿರುವ ನೀರಿನ ಮೌಲ್ಯಮಾಪನದ ಪ್ರಕಾರ ದೇಶದ ಸರಾಸರಿ ವಾರ್ಷಿಕ ನೀರಿನ ಲಭ್ಯತೆ 1,869-ಬಿಲಿಯನ್ ಕ್ಯೂಬಿಕ್ ಮೀಟರ್ ನಷ್ಟಿದೆ, ಇದರಲ್ಲಿ 1,123 ಬಿಸಿಎಂ ನಷ್ಟು ಮಾತ್ರ ಬಳಕೆ ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನೀರಿನ ಸಂಪನ್ಮೂಲಗಳನ್ನು ವೃದ್ಧಿಪಡಿಸಲು, ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆ ಮಾಡಲು ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವೂ ನೆರವು ನೀಡುತ್ತಿದೆ ಎಂದು ಜಾಟ್ ತಿಳಿಸಿದ್ದಾರೆ.