

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಯನ್ನು ಭೇಟಿ ಮಾಡಲು ಸೋಮವಾರ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಸಾಹಿತಿಗಳ ಹತ್ಯೆ, ಗೋಮಾಂಸ ವಿವಾದ ಹಾಗೂ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕುರಿತಂತೆ ಕಾಳಜಿ ವಹಿಸಿರುವ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಇಂದು ಸಂಜೆ ಭೇಟಿಯಾಗಲಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಸೋನಿಯಾ ಗಾಂಧಿ ಅವರು, ಕೆಲವು ಸಂಘಟನೆಗಳು ಹಾಗೂ ತಮ್ಮದೇ ಸಿದ್ಧಾಂತಗಳನ್ನು ಹೊಂದಿರುವ ಕೆಲವು ಜನರು ಇದೀಗ ದೇಶದಲ್ಲಿರುವ ಜನತೆಯನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಇದೀಗ ನಡೆಯುತ್ತಿರುವ ಎಲ್ಲಾ ಘಟನೆಗಳು ಅಕಸ್ಮಿಕವಾಗಿ ಆಗುತ್ತಿದೆ ಎಂದು ಕೊಳ್ಳಲು ನಾವು ಭ್ರಮೆಯಲ್ಲಿ ಇಲ್ಲ. ದ್ವೇಷ, ಹಿಂಸೆ ಹಾಗೂ ಸಣ್ಣ ಮನಸ್ಸುಳ್ಳ ಜನರು ಈ ಕೃತ್ಯಗಳನ್ನು ಉದ್ದೇಶ ಪೂರ್ವಕವಾಗಿ ಪೂರ್ವ ನಿರ್ಧರಿತದಂತೆ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇಂತಹ ಘಟನೆಗಳು ನಡೆಯಲು ನಾವು ಬಿಡುವುದಿಲ್ಲ. ಇಂತಹ ಕೃತ್ಯಗಳು ದೇಶದ ಬುಡವನ್ನೇ ಅಲುಗಾಡಿಸಲಿದ್ದು, ಇಂತಹ ಯೋಜನೆಗಳು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಕೃತ್ಯ ವಿರೋಧಿಸಿ ಯುದ್ಧ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.