

ಚೆನ್ನೈ: ಜಾತ್ಯಾತೀತತೆ ಎಂದರೆ ಧರ್ಮಗಳನ್ನು ನಂಬದ ಜನರನ್ನು ತಿರಸ್ಕರಿಸುವುದಲ್ಲ. ಧರ್ಮಗಳನ್ನು ನಂಬುವ ಹಾಗೂ ನಂಬದ ಎಲ್ಲಾ ಎಲ್ಲರನ್ನೂ ಗೌರವಿಸುವುದು ಎಂದರ್ಥ ಎಂದು ಬೌದ್ಧಗುರು ದಲೈಲಾಮಾ ಅವರು ಮಂಗಳವಾರ ಹೇಳಿದ್ದಾರೆ.
ದೇಶದಲ್ಲಿ ಸಷ್ಟಿಯಾಗಿರುವ ಅಸಹಿಷ್ಣುತೆ ವಿವಾದ ಕುರಿತಂತೆ ಐಐಟಿ ಮದ್ರಾಸ್ ನಲ್ಲಿ ನಡೆದ 'ಹ್ಯೂಮನ್ ಅಪ್ರೋಚ್ ಟು ವರ್ಡ್ಲ್ ಪೀಸ್' ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಭಿನ್ನಮತೀಯ ಹಾಗೂ ಅಸಮ್ಮತಿ ಸೂಚಿಸುವ ಜನರ ಧ್ವನಿಯನ್ನು ತಿರಸ್ಕರಿಸುವುದು ಸರಿಯಲ್ಲ. ಪ್ರಪಂಚದಲ್ಲಿ 7 ಬಿಲಿಯನ್ ರಷ್ಟು ಜನರಿದ್ದಾರೆ. ಇಲ್ಲಿ ಧರ್ಮ ನಂಬುವ ಹಾಗೂ ನಂಬದ ಜನರಿದ್ದಾರೆ. ನಂಬಿಕೆಯೆಂಬುದು ಒಬ್ಬ ವ್ಯಕ್ತಿಯ ಖಾಸಗಿ ವಿಚಾರ. ಒಬ್ಬ ವ್ಯಕ್ತಿಯ ನಂಬಿಕೆಯನ್ನು ಮತ್ತೊಬ್ಬ ವ್ಯಕ್ತಿ ಗೌರವಿಸಬೇಕು.
ಚೀನಿಯರು ಎಲ್ಲಿಯೇ ಹೋದರೂ ಅಲ್ಲಿ ಚೀನಾ ನಗರದ ವಾತಾವರಣವನ್ನು ನಿರ್ಮಿಸುತ್ತಾರೆ. ಹೀಗೆಯೇ ಭಾರತೀಯರೂ ಸಹ ಎಲ್ಲಿಯೋ ಹೋದರು ಅಲ್ಲಿ ಭಾರತದ ನಗರವನ್ನು ಸೃಷ್ಟಿಸಬೇಕು. ಹೀಗಾದರೆ ಮಾತ್ರ ಧರ್ಮದ ನಂಬಿಕೆಗಳು ಇತರೆ ದೇಶಗಳಿಗೆ ಪಸರಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ದಲೈಲಾಮಾ ನಂತರ ಮುಂದಿನ ಉತ್ತರಾಧಿಕಾರಿಯಾಗಿ ಮಹಿಳೆಯೊಬ್ಬರು ಬರಲಿದ್ದಾರೆಂಬ ಅನುಮಾನಗಳಿಗೆ ಉತ್ತರ ನೀಡಿರುವ ಅವರು, ಮುಂದಿನ ಉತ್ತರಾಧಿಕಾರಿಯಾಗಿ ಮಹಿಳೆಯೊಬ್ಬರು ಬರುವ ಸಾಧ್ಯತೆ ಇದೆ. ಈ ಬಗ್ಗೆ ಈ ಹಿಂದೆಯೇ ನಾನು ಹೇಳಿದ್ದೆ. ಮುಂದಿನ ದಿನಗಳಲ್ಲಿ ಉತ್ತರಾಧಿಕಾರಿಯಾಗಿ ಬರುವ ಮಹಿಳೆ ಸುಂದರವಾಗಿರಬೇಕು. ಸುಂದರತೆ ಎನ್ನುವುದು ಎಂತಹ ವ್ಯಕ್ತಿಯನ್ನೇ ಆದರೂ ಬದಲಿಸಬಹುದು. ಅಲ್ಲದೆ, ಪುರುಷನಿಗಿಂತ ಮಹಿಳೆ ಹೆಚ್ಚು ಪ್ರೀತಿ ತೋರಿಸುತ್ತಾಳೆ. ರಾಜ್ಯಗಳಲ್ಲಿ ಹೆಚ್ಚು ಮಹಿಳೆಯರು ಮುಖ್ಯಸ್ಥರಾದರೆ ಪ್ರಪಂಚದಲ್ಲಿ ಶಾಂತಿ ವಾತಾವರಣವಿರುತ್ತದೆ ಎಂದು ಹೇಳಿದ್ದಾರೆ.