

ಲಖನೌ: ಬಿಎಸ್ ಪಿ ಮುಖಂಡೆ ಮಾಯಾವತಿ ಅವರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದ ಉತ್ತರ ಪ್ರದೇಶ ಬಿಜೆಪಿ ಮುಖಂಡ ದಯಾಶಂಕರ ಅವರ ವಿರುದ್ಧ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶ ರಾಜಧಾನಿ ಲಖನೌ ಸೇರಿದಂತೆ ರಾಜ್ಯದ್ಯಂತ ಲಕ್ಷಾಂತರ ಬಿಎಸ್ ಪಿ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಬಿಜೆಪಿ ಮುಖಂಡ ದಯಾಶಂಕರ ಅವರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಲಖನೌನಲ್ಲಿ ಬಿಎಸ್ ಪಿ ಕಾರ್ಯಕರ್ತರ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಹರಸಹಾಸ ಪಡುತ್ತಿದ್ದು, ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ಹೇಳಲಾಗುತ್ತಿದೆ.
ಪ್ರತಿಭಟನಾಕಾರರ ನಿಯಂತ್ರಣಕ್ಕಾಗಿ ನೂರಾರು ಮಂದಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ, ಸಾವಿರಾರು ಸಂಖ್ಯೆಯಲ್ಲಿರುವ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನು ಕೆಲವೆಡೆ ಲಾಠಿ ಪ್ರಹಾರ ನಡೆಸಲಾಗಿದ್ದು, ಮತ್ತೆ ಕೆಲವೆಡೆ ಪೊಲೀಸರ ಮೇಲೆಯೇ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ ಘಟನೆ ಕೂಡ ದಾಖಲಾಗಿದೆ. ಈ ನಡುವೆ ದಯಾಶಂಕರ ಅವರ ಮನೆ ಮೇಲೆ ಬಿಎಸ್ ಪಿ ಕಾರ್ಯಕರ್ತರು ಮುತ್ತಿಗೆ ಹಾಕುವ ಕುರಿತು ಮಾಹಿತಿ ಪಡೆದ ಪೊಲೀಸರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರುವ ದಯಾಶಂಕರ ಅವರ ಮನೆಗೆ ವ್ಯಾಪಕ ಭದ್ರತೆ ಒದಗಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲೂ ಬಿಜೆಪಿ ವಿರುದ್ಧ ಬಿಎಸ್ ಪಿ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ದಯಾಶಂಕರ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಎಸ್ ಪಿ ಸಂಸದ ಸತೀಶ್ ಮಿಶ್ರಾ ಅವರು, ಹೆಣ್ಣುಮಕ್ಕಳ ಕುರಿತು ಕೀಳುಮಟ್ಟದಲ್ಲಿ ಯೋಚನೆ ಮಾಡುವ ದಯಾಶಂಕರರಂತಹವರನ್ನು ಜೈಲಿಗಟ್ಟಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ಬಿಎಸ್ ಪಿ ಭ್ರಷ್ಟಾಚಾರವೆಸಗಿದೆ ಎಂಬ ಆರೋಪದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ವೇಳೆ ಆಘಾತಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ದಯಾಶಂಕರ್ ಸಿಂಗ್ ಮಾಯಾವತಿಯನ್ನು ವೈಶ್ಯಗಿಂತಲೂ ಕಡೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಉಭಯ ಸದನಗಳಲ್ಲಿ ವ್ಯಾಪಕ ಕೋಲಾಹಲಕ್ಕೆ ಕಾರಣವಾಗಿತ್ತು.