

ನವದೆಹಲಿ; ಜೆಎನ್ ಯುಗೆ ಸಮಯವನ್ನು ಕೊಡಿ ನಾವು ಜನಕ್ಕೆ ಹೇಳುತ್ತೇವೆ ನಮಗೆ ಬೇಕಿರುವುದು ಭಾರತದಿಂದ ಸ್ವಾತಂತ್ರ್ಯವಲ್ಲ, ಭಾರತದಲ್ಲಿ ಸ್ವಾತಂತ್ರ್ಯವೆಂದು ಎಂದು ಜೈಲಿನಿಂದ ಬಿಡುಗಡೆಗೊಂಡ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ದೇಶದ್ರೋಹ ಆರೋಪದಡಿ ಬಂಧಿತನಾಗಿದ್ದ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ ಯು) ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ನಿನ್ನೆಯಷ್ಟೇ ಬಿಡುಗಡೆಗೊಂಡಿದ್ದರು. ಬಿಡುಗಡೆಗೊಂಡ ನಂತರ ವಿವಿಯ ಆವರಣದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಅವರು, ಹಸಿವಿಂದ ಸ್ವಾತಂತ್ರ್ಯ, ಭ್ರಷ್ಟಾಚಾರದಿಂದ ಸ್ವಾತಂತ್ರ್ಯ, ತಾರತಮ್ಯದಿಂದ ಸ್ವಾತಂತ್ರ್ಯ ಎನ್ನುತ್ತಾ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದರು. ಕನ್ಹಯ್ಯ ಈ ಮಾತನ್ನು ಹೇಳುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಕನ್ಹಯ್ಯ ಪರ ಘೋಷಣೆಯನ್ನು ಕೂಗಲು ಆರಂಭಿಸಿದರು.
ಜೆಎನ್ ಯುವಿನಲ್ಲಿ ಪ್ರವೇಶ ಪಡೆಯುವುದು ಎಷ್ಟು ಕಷ್ಟವೋ, ಜೆಎನ್ ಯುನಲ್ಲಿರುವವರನ್ನು ಮರೆಯುವುದೂ ಅಷ್ಟೆ ಕಷ್ಟ ಎಂದು ತಮ್ಮ ಮಾತನ್ನು ಆರಂಭಿಸಿದ ಅವರು, ಜೆಎನ್ ಯು ವಿಚಾರವಾಗಿ ನನ್ನ ಪರ ನಿಂತ ಎಲ್ಲರಿಗೂ ಧನ್ಯವಾದಗಳು. ಸಂಸತ್ತಿನಲ್ಲಿ ಕುಳಿತು ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ನಿರ್ಧಾರ ಮಾಡಿದವರಿಗೆಲ್ಲರಿಗೂ ಧನ್ಯವಾದಗಳು. ಪೊಲೀಸರು ಹಾಗೂ ಸುದ್ದಿ ವಾಹಿನಿಗಳಿಗೆ ಧನ್ಯವಾದಗಳು ಎಂದು ತಮ್ಮ ಮಾತನ್ನು ಆರಂಭಿಸಿದ ಕನ್ಹಯ್ಯಾ, ಕ್ಯಾಂಪನ್ ನ ಹೊರಗಿರುವ ಎಬಿವಿಪಿಗೆ ಹೋಲಿಸಿದರೆ ಕ್ಯಾಂಪಸ್ ನ ಒಳಗಿರುವ ಎಬಿವಿಪಿ ಬಹಳ ವಿವೇಚನೆ ಹೊಂದಿದೆ. ಸ್ನೇಹಿತರೇ, ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ನಾನು ಎಬಿವಿಪಿ ವಿರುದ್ಧ ದ್ವೇಷ ಸಾಧಿಸುವುದಿಲ್ಲ. ನನಗೆ ನಮ್ಮ ಪ್ರಜಾಪ್ರಭುತ್ವದ ಮೇಲೆ ಹಾಗೂ ಸಂವಿಧಾನದ ಮೇಲೆ ನಂಬಿಕೆಯಿದೆ. ಎಬಿವಿಪಿಯನ್ನು ಶತ್ರುಗಳಾಗಿ ನೋಡುವುದಕ್ಕಿಂತ ಅದನ್ನು ವಿರೋಧ ಪಕ್ಷವಾಗಿ ನೋಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ಕೆಲವರು ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುತ್ತೇವೆಂದು ಹೇಳುತ್ತಾರೆ. ನಾವು ಭಾರತೀಯರು ಬೇಗನೆ ಎಲ್ಲವನ್ನೂ ಮರೆತು ಬಿಡುತ್ತೇವೆ. ಆದರೆ, ಚುನಾವಣಾ ಪ್ರಚಾರದ ವೇಳೆ ನಡೆಸಿದ ಯೂ-ಟರ್ನ್ ಗಳನ್ನು ಮಾತ್ರ ಮರೆಯುವುದಿಲ್ಲ. ಈ ದೇಶದಲ್ಲಿ ಜನವಿರೋಧಿ ಸರ್ಕಾರವಿದೆ. ಸರ್ಕಾರದ ವಿರುದ್ಧ ಮಾತನಾಡಿದ ಕೂಡಲೇ, ಅವರ ಸೈಬರ್ ಘಟಕವು ನಿಮಗೆ ತಿರುಚಿದ ವಿಡಿಯೋ ಕಳುಹಿಸುತ್ತದೆ. ನಿಮ್ಮ ಹಾಸ್ಟೆಲ್ ನಲ್ಲಿರುವ ಕಾಂಡೋಮ್ ಗಳನ್ನು ಲೆಕ್ಕ ಹಾಕುತ್ತದೆ.
ಸಂಸತ್ ನಲ್ಲಿ ಬಿಜೆಪಿ ಸಂಸದರು ಯೋಧರು ಗಡಿಗಳಲ್ಲಿ ಸಾಯುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬಗ್ಗೆ ಏಕೆ ಮಾತನಾಡುವುದಿಲ್ಲ? ಗಡಿಗಳಲ್ಲಿ ಹುತಾತ್ಮರಾಗುತ್ತಿರುವ ಯೋಧರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಜೆಎನ್ ಯು ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಯುಜಿಸಿ ಪ್ರತಿಭಟನೆ ಮತ್ತು ರೋಹಿತ್ ವೇಮುನಿಗೆ ನ್ಯಾಯ ಕೇಳಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಾಶಪಡಿಸಲು ಸಂಚು ನಡೆಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿರುತ್ತಾರೆ. ಅವರು ಅವರ ಮನದ ಮಾತುಗಳನ್ನು ಮಾತನಾಡುತ್ತಾರೆ. ಆದರೆ. ಜನರ ಮಾತನ್ನು ಕೇಳುವುದಿಲ್ಲ. ಕೆಲವು ದಿನಗಳ ಹಿಂದೆ ಮೋದಿ ಅವರು ಸತ್ಯ ಮೇವ ಜಯತೇ ಎಂದು ಟ್ವೀಟ್ ಮಾಡಿದ್ದರು. ಇದನ್ನು ನಾನು ಒಪ್ಪುತ್ತೇನೆ. ಹೌದು ಸತ್ಯ ಮೇವ ಜಯತೇ. ದೇಶದ ಶೇ.69 ರಷ್ಡಟು ಮಂದಿ ಮೋದಿಯವರ ಸಿದ್ಧಾಂತದ ವಿರುದ್ಧ ಮತ ಹಾಕಿದ್ದಾರೆ. ಕೇವಲ ಶೇ.31 ರಷ್ಟು ಮಂದಿ ಮಾತ್ರ ಅವರ ಸುಳ್ಳುಗಳಿಂದ ಮೂರ್ಖರಾಗಿದ್ದಾರೆ.
ನಿನೇಗೆ ಆಗಾಗ ಲಾಲ್ ಸಲಾಂ ಎಂದು ಹೇಳುತ್ತೀಯಾ ಎಂದು ಪೊಲೀಸರು ನನ್ನನನ್ನು ಪ್ರಶ್ನಿಸುತ್ತಿದ್ದರು. ಅದಕ್ಕೆ ನಾನು ಹೇಳಿದೆ ಲಾಲ್ ಎಂದರೆ ಕ್ರಾಂತಿ. ಸಲಾಂ ಎಂದರೆ ಕ್ರಾಂತಿಗೆ ಸಲಾಂ ಎಂದು. ನಾನು ಹಿಂದುಳಿದ ಜಾಗದಿಂದ ಬಡಕುಟುಂಬದಿಂದ ಬಂದವನು. ಪೊಲೀಸರಲ್ಲೂ ಬಹುತೇಕ ಮಂದಿ ಬಡ ಹಿನ್ನೆಲೆಯಿಂದ ಬಂದವರೇ.
ನಾನು ಓದುವುದು ಹೆಚ್ಚು ವ್ಯವಸ್ಥೆಯನ್ನು ಎದುರಿಸುವುದು ಕಡಿಮೆ. ಆದರೆ ಈ ಬಾರಿ, ನಾನು ಓದಿದ್ದು ಕಡಿಮೆ, ವ್ಯವಸ್ಥೆಯನ್ನು ಎದುರಿಸಿದ್ದು ಹೆಚ್ಚು. ಜೈಲಿನಲ್ಲಿದ್ದಾಗ ನನಗೆ ಬೆಂಬಲ ನೀಡಿದ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಮ್ಮ ದೇಶದ ಕಾನೂನು ಮತ್ತು ಸಂವಿಧಾನದ ಮೇಲೆ ನನಗೆ ನಂಬಿಕೆಯಿಂದೆ. ಬದಲಾವಣೆಯೇ ಸತ್ಯ. ಅಂಥ ಬದಲಾವಣೆ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.