

ನವದೆಹಲಿ: ಬಹು ನಿರೀಕ್ಷಿತ ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ಸಂಪರ್ಕ ಬೆಸೆಯಲಿರುವ ಸುಮಾರು 1400 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಕೇವಲ 18 ತಿಂಗಳಲ್ಲಿ ಈ ಬೃಹತ್ ಹೈವೇ ಮೂರು ದೇಶಗಳನ್ನು ಸಂಪರ್ಕಿಸಲಿದೆ.
ಮೂಲಗಳ ಪ್ರಕಾರ ಮೂರು ದೇಶಗಳ ಬಹುಉದ್ದೇಶಿತ ಈ ತ್ರಿಪಕ್ಷೀಯ ಯೋಜನೆಯ ಕಾಮಗಾರಿ ಈಗಾಗಲೇ ಅಂತಿಮ ಹಂತ ತಲುಪಿದ್ದು, ಇನ್ನು ಕೇವಲ 18 ತಿಂಗಳ ಒಳಗಾಗಿ ಮರುನಿರ್ಮಾಣ ಕಾರ್ಯ ಮುಗಿಯಲಿದೆ. ಇದಕ್ಕೆ ಭಾರತ ಹಣಕಾಸಿನ ನೆರವು ನೀಡಿದೆ ಎಂದು ಥಾಯ್ಲೆಂಡ್‌ನ ಭಾರತೀಯ ರಾಯಭಾರಿ ಭಾಗ್ವತ್ ಸಿಂಗ್ ಬಿಶ್ನೋಯ್ ತಿಳಿಸಿದ್ದಾರೆ.
ಮೂರು ದೇಶಗಳನ್ನು ಸಂಪರ್ಕಿಸುವ ಈ ರಸ್ತೆ, ವ್ಯಾಪಾರ ವಹಿವಾಟಿನಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಮೂರೂ ದೇಶಗಳ ನಡುವಿನ ವಾಣಿಜ್ಯ, ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷಾ ಸೊಗಡಿನ ವಿನಿಮಯಕ್ಕೂ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಪ್ರವಾಸೋಧ್ಯಮ ದೃಷ್ಟಿಯಿಂದಾಗಿ ಈ ಯೋಜನೆ ಪ್ರಾಮುಖ್ಯತೆ ಪಡೆದಿದ್ದು, ಕಳೆದ ವರ್ಷ ಭಾರತದಿಂದ ಥಾಯ್ಲೆಂಡ್‌ಗೆ 10 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಹೀಗಾಗಿ ಪ್ರವಾಸೋದ್ಯಮ ದೃಷ್ಟಿಯಿಂದಲೂ ಈ ಯೋಜನೆ ಮಹತ್ವ ಪಡೆದಿದೆ.
ಕಳೆದ ವರ್ಷ ಭಾರತ ಮತ್ತು ಥಾಯ್ಲೆಂಡ್ ನಡುವೆ 8 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ನಡೆದಿತ್ತು. ಮ್ಯಾನ್ಮಾರ್-ದಾವಿ ಬಂದರು ಮತ್ತು ಥಾಯ್ಲೆಂಡ್ ಗಡಿ ಭಾಗದಲ್ಲಿರುವ ಥಾಯ್ಲೆಂಡ್ ಇಂಡಸ್ಟ್ರಿಯಲ್ ಎಸ್ಟೇಟ್ ಯೋಜನೆಯಿಂದ ಭಾರತ ಮತ್ತು ಆಗ್ನೇಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಸಲಿದೆ ಎಂದು ಹೇಳಲಾಗುತ್ತಿದೆ.