

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚುವುದು ತಪ್ಪು, ಒಪ್ಪಲಾರದ ಕೃತ್ಯ ಎಂದು ಕೆಲ ತಿಂಗಳ ಹಿಂದೆ ಎನ್ ಕೌಂಟರ್ ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ ಹೇಳಿದ್ದಾರೆ.
ಶಾಲೆಗಳಿಗೆ ಬೆಂಕಿ ಹಚ್ಚುತ್ತಿರುವ ಕೃತ್ಯವನ್ನು ಯಾರೇ ಮಾಡಿದ್ದರೂ ಅದು ತಪ್ಪು ಹಾಗೂ ಖಂಡನೀಯ ಎಂದು ಮುಜಾಫರ್ ವಾನಿ ತಿಳಿಸಿದ್ದಾರೆ. 115 ದಿನಗಳಿಂದ ಉದ್ವಿಗ್ನ ವಾತಾವರಣ ಎದುರಿಸುತ್ತಿರುವ ಕಾಶ್ಮೀರದಲ್ಲಿ ಭಯೋತ್ಪಾದಕರು, ಪ್ರತಿಭಟನಾ ನಿರತರು, 26 ಶಾಲೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಜಮ್ಮು-ಕಾಶ್ಮೀರ ಹೈ ಕೋರ್ಟ್ ಗೆ ಮಾಹಿತಿ ನೀಡಲಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚುತ್ತಿರುವುದರ ಹಿಂದೆ ಪ್ರತ್ಯೇಕತಾವಾದಿಗಳ ಕೈವಾಡವಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಜಮಾತ್-ಎ- ಇಸ್ಲಾಮಿ ನಾಯಕರ ಕೈವಾಡವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಶ್ಮೀರದಲ್ಲಿ ಈ ವರೆಗೂ ನಡೆಯುತ್ತಿದ್ದ ಕಲ್ಲು ತೂರಾಟಗಳನ್ನು ಹತೋಟಿಗೆ ತರಲಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರು ಶಾಲೆಯ ಮೇಲೆ ದಾಳಿ ನಡೆಸುವ ಹೊಸ ತಂತ್ರವನ್ನು ರೂಪಿಸಿದ್ದಾರೆ.