

ಬರ್ಮರ್: ಭಾರತ ಎಂದಿಗೂ ಯಾರ ಮೇಲೆಯೂ ಮೊದಲು ದಾಳಿ ಮಾಡಲು ಹೋಗುವುದಿಲ್ಲ. ನಮ್ಮ ಮೇಲೆ ದಾಳಿ ಮಾಡಿದರೆ ನಾವು ಹಾರಿಸುವ ಗುಂಡುಗಳಿಗೆ ಲೆಕ್ಕ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ಹೇಳಿದ್ದಾರೆ.
ರಾಜಸ್ತಾನದ ಪಶ್ಚಿಮ ಗಡಿ ಜಿಲ್ಲೆಗಳಾದ ಬಾರ್ಮರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, ನಮ್ಮದು ವಸುದೈವ ಕುಟುಂಬಕಂ ( ವಿಶ್ವವೇ ಒಂದು ಕುಟುಂಬ ) ಸಂಸ್ಕೃತಿ ಸಾರುವ ದೇಶ. ನಾವು ಇನ್ನೊಬ್ಬ ಭೂಮಿಯನ್ನು ಆಕ್ರಮಿಸಿಕೊಳ್ಳಲು ಹೋಗುವುದಿಲ್ಲ. ನಾವು ಯಾರ ಮೇಲೆಯೂ ಮೊದಲು ದಾಳಿ ಮಾಡುವುದಿಲ್ಲ. ಒಂದು ವೇಳೆ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ದಾಳಿ ಪ್ರತಿಯಾಗಿ ನಾವು ಹಾರಿಸುವ ಗುಂಡುಗಳಿಗೆ ಲೆಕ್ಕ ಇರುವುದಿಲ್ಲ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಾಳಿಯಿಂದಾಗಿ ಗಡಿಯಲ್ಲಿ ನಾಶಗೊಂಡಿರುವ ಸ್ಥಳಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುತ್ತದೆ. ಗಸ್ತು ತಿರುಗುವ ಯೋಧರಿಗಾಗಿ ಅನುಕೂಲವಾಗುವಂತೆ ರಸ್ತೆಗಳ ಕಾಮಗಾರಿಯನ್ನು ಮಾಡಿಸಲಾಗುತ್ತದೆ. ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳು ಮೂಲಭೂತ ಸೌಕರ್ಯಗಳು ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುತ್ತೇವೆಂದು ಇದೇ ವೇಳೆ ಯೋಧರಿಗೆ ಭರವಸೆ ನೀಡಿದ್ದಾರೆ.