

ಮಂಡಿ: ಇಸ್ರೇಲ್ ಸೇನೆ ಬಗ್ಗೆ ಮಾತನಾಡುತ್ತಿದ್ದುದ್ದನ್ನು ನಾವು ಕೇಳುತ್ತಿದ್ದೆವು, ಸೀಮಿತ ದಾಳಿ ಬಳಿಕ ಇಡೀ ವಿಶ್ವವೇ ಇಂದು ಭಾರತೀಯ ಸೇನೆ ಬಗ್ಗೆ ಮಾತನಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿಯವರು ಭೇಟಿ ನೀಡಿದ್ದಾರೆ. ಶಿಮ್ಲಾದ ಮಂಡಿ ಜಿಲ್ಲೆಯಲ್ಲಿ ಮೂರು ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿರುವ ಅವರು, ಭಾರತೀಯ ಸೇನೆಯನ್ನು ಕೊಂಡಾಡಿದ್ದಾರೆ.
ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಬಳಿಕ ಇಡೀ ವಿಶ್ವವೇ ಇಂದು ಭಾರತೀಯ ಸೇನೆ ಬಗ್ಗೆ ಮಾತನಾಡುತ್ತಿದೆ. ಈ ಹಿಂದೆ ಇದೇ ರೀತಿಯ ಮಾತುಗಳನ್ನು ಇಸ್ರೇಲ್ ಸೇನೆ ಬಗ್ಗೆ ಕೇಳುತ್ತಿದ್ದೆವು. ಭಾರತೀಯ ಸೇನೆ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದು ಇದೀಗ ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶವೊಂದು ದೈವಭೂಮಿ ಹಾಗೂ ವೀರಭೂಮಿಯಾಗಿದೆ. ಇಲ್ಲಿರುವ ಪ್ರತೀಯೊಂದು ಜಿಲ್ಲೆಯ ಕುಟುಂಬ ಸೇನೆಯ ಸದಸ್ಯನಾಗಿದೆ. ಹಿಮಾಚಲ ಪ್ರದೇಶದಲ್ಲಿ ನಾವು ಚಿಕ್ಕ ಕಾಶಿಯನ್ನು ನೋಡಬಹುದು. ಇಂತಹ ದೈವಭೂಮಿಯಲ್ಲಿ ತಲೆಭಾಗುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ ಸಮಾನ ವೇತನ, ಸಮಾನ ಪಿಂಚಣಿ ಕುರಿತಂತೆ ಮಾತನಾಡಿರುವ ಅವರು, ಸಮಾನ ವೇತನ ಹಾಗೂ ಸಮಾನ ಪಿಂಚಣಿ ಸಮಸ್ಯೆ ಕಳೆದ 40 ವರ್ಷಗಳಿಂದಲೂ ಬಗೆಹರಿದಿರಲಿಲ್ಲ. ಈ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿದೆ. ಇದರಿಂದ ಕೇವಲ ಯೋಧರಷ್ಟೇ ಅಲ್ಲ ಅವರ ಕುಟುಂಬಗಳು ಕೂಡ ನಮಗೆ ಆಶೀರ್ವದಿಸಿದೆ.
ಈ ಹಿಂದೆ ಪ್ರಚಾರಕ್ಕೆಂದು ಬಂದಾಗಲೆಲ್ಲಾ ಸಮಾನ ವೇತನ, ಸಮಾನ ಪಿಂಚಣಿ ಬಗ್ಗೆ ಮಾತನಾಡುತ್ತಿದ್ದೆ. ನಿಮ್ಮ ಹಕ್ಕನ್ನು ನಾನು ನಿಮಗೆ ನೀಡಿದ್ದೇನೆ ಅಷ್ಟೇ ಎಂಬುದನ್ನು ಈ ವೀರಭೂಮಿಯಲ್ಲಿ ಹೇಳಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.