

ನವದೆಹಲಿ: ಈ ಹಿಂದೆ ಕೂಡ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸಲಾಗಿತ್ತು. ಆದರೆ, ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದು ಮಾತ್ರ ಇದೇ ಮೊದಲು ಎಂದು ಸಂಸದೀಯ ಸಮಿತಿಗೆ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಸೆ.29ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ರಾಜಕೀಯ ಪ್ರೇರಿತ ಹೇಳಿಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮನೋಹರ್ ಪರಿಕ್ಕರ್ ಅವರು, ಉಗ್ರರ ವಿರುದ್ಧ ಸೀಮಿತ ದಾಳಿ ನಡೆಸಿರುವುದು ಇದೇ ಮೊದಲು ಎಂದು ಹೇಳಿದ್ದರು.
ಈ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ಸಂಸದರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಸದೀಯ ಸಮಿತಿಗೆ ಜೈಶಂಕರ್ ಅವರು ಮಾಹಿತಿ ನೀಡಿದ್ದಾರೆ.
ಉಗ್ರರು ಅಡುಗುತಾಣಗಳ ಮೇಲೆ ಹಾಗೂ ಉಗ್ರರ ವಿರುದ್ಧ ಈ ಹಿಂದೆ ಕೂಡ ಭಾರತೀಯ ಸೇನೆ ಸೀಮಿತ ದಾಳಿಯನ್ನು ನಡೆಸಿತ್ತು. ಆದರೆ, ಸೀಮಿತ ದಾಳಿಯ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದು ಮಾತ್ರ ಇದೇ ಮೊದಲು. ಈ ಹಿಂದೆ ನಡೆಸಿದ್ದ ದಾಳಿ ವೃತ್ತಿಪರವಾಗಿತ್ತು ಎಂದು ಮಾಹಿತಿ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಸೀಮಿತ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಸೇನೆಗೆ ಮಾಹಿತಿ ನೀಡಲಾಗಿತ್ತು. ಉದ್ದೇಶಿತವಾಗಿಯೇ ಉಗ್ರರ ವಿರುದ್ಧ ದಾಳಿಯನ್ನು ನಡೆಸಲಾಗಿತ್ತು. ಭಾರತ ಮತ್ತೆ ಸೀಮಿತ ದಾಳಿ ನಡೆಸಲಿದೆಯೇ ಎಂಬ ಅನುಮಾನಗಳು ಈಗಲೂ ಪಾಕಿಸ್ತಾನದಲ್ಲಿದೆ. ಸೀಮಿತ ದಾಳಿ ನಡೆಸುವ ಸಲುವಾಗಿ ಸೇನೆ ಗಡಿ ನಿಯಂತ್ರಣ ರೇಖೆಯನ್ನು ದಾಟಿತ್ತೇ ವಿನಃ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.