ಬಾರಬಂಕಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಸಮಾಜವಾದಿ ಪಕ್ಷದ ನಾಯಕ, ಸಚಿವ ಆಜಂ ಖಾನ್ ಬುಧವಾರ 'ನನಗೆ ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿವೆ. ಆದರೆ ಮುಸ್ಲಿಂ ಎನ್ನುವುದು ನ್ಯೂನ್ಯತೆಯಾಗಿದೆ' ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉರಿ ಉಗ್ರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾನ್, ನನ್ನನ್ನು ಪ್ರಧಾನಿಯನ್ನಾ ಮಾಡಿ. ಆಮೇಲೆ ನೋಡಿ, ನಾನು ಹೇಗೆ ಆಡಳಿತ ನಡೆಸುತ್ತೇನೆ ಎಂದರು.
ಪ್ರಾಧಾನಿ ಹುದ್ದೆಗೇರಲು ನನ್ನಲ್ಲಿ ಶಿಕ್ಷಣ, ಅನುಭವ ಸೇರಿದಂತೆ ಎಲ್ಲಾ ಅರ್ಹತೆಗಳಿವೆ.ಮುಸ್ಲಿಂ ಎನ್ನುವುದೊಂದು ಹೊರತುಪಡಿಸಿ ಬೇರೆ ಯಾವುದೇ ನ್ಯೂನ್ಯತೆಗಳಿಲ್ಲ. ಹೀಗಾಗಿ ನಾನು ಮುಲಾಯಂ ಸಿಂಗ್ ಅವರ ಬಳಿ ನನ್ನ ಹೆಸರನ್ನು ಪ್ರಧಾನಿ ಹುದ್ದೆಗೆ ಘೋಷಿಸಲು ಕೋರುತ್ತೇನೆ' ಎಂದರು.
ಇದೇ ವೇಳೆ ತಮ್ಮ ವಿರುದ್ಧ ಟೀಕೆ ಮಾಡುವವರು ಬೊಗಳುವ ನಾಯಿಗಳು ಎಂದ ಖಾನ್, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಸ್‌ಪಿ ಒಂದಾಗಿಯೇ ಇದೆ ಎಂದ ಹೇಳಿದರು.