

ಉತ್ತರಪ್ರದೇಶ: ಮಧ್ಯರಾತ್ರಿ ಮನೆಗೆ ನುಗ್ಗಿದ್ದ ದರೋಡೆಕೋರರ ಗುಂಪೊಂದು ಕಳ್ಳತನ ಮಾಡಿ ನಂತರ ಬಾಲಕಿಯನ್ನು ಹೊತ್ತೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಲಖನೌನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ರಾತ್ರಿ 1 ಗಂಟೆ ಸುಮಾರಿಗೆ ದರೋಡೆಕೋರರು ಬಾಗಿಲು ಬಡಿದಿದ್ದಾರೆ. ಈ ವೇಳೆ ಬಾಗಿಲು ತೆಗೆಯದಿದ್ದಾಗ ಬಾಗಿಲು ಹೊಡೆದು ಒಳನುಗ್ಗಿದ್ದಾರೆ. ನಂತರ ಕೊಠಡಿಯೊಳಗೆ ಮಲಗಿದ್ದ ಮನೆಯ ಮಾಲೀಕನಿಗೆ ಥಳಿಸಿರುವ ದರೋಡೆಕೋರರು, ಮನೆಯಲ್ಲಿದ್ದ ವಸ್ತುಗಳು ಹಾಗೂ ಹಣವನ್ನು ದೋಚಿದ್ದಾರೆ. ಅಲ್ಲದೆ. ಮಲಗಿದ್ದ 12 ವರ್ಷದ ಬಾಲಕಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ನಾನು ಮತ್ತು ಪತ್ನಿ ಒಂದು ಕೊಠಡಿಯಲ್ಲಿ ಮಲಗಿದ್ದೆವು. ನನ್ನ ಮಗ ಹಾಗೂ ಮಗಳು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ಬಾಗಿಲು ಬಡಿಯುತ್ತಿರುವ ಶಬ್ಧವಾಯಿತು. ಕಿಟಕಿಯಲ್ಲಿ ನೋಡಿದಾಗ ಆ ಗುಂಪೊಂದು ನಿಂತಿತ್ತು. ಈ ವೇಳೆ ಎಷ್ಟು ಬಡಿದರೂ ನಾವು ಬಾಗಿಲು ತೆಗೆಯಲಿಲ್ಲ. ನಂತರ ಬಾಗಿಲನ್ನು ಹೊಡೆದು ಕಳ್ಳರು ಒಳನುಗ್ಗಿದರು. ಗುಂಪಿನಲ್ಲಿ ಐವರು ಜನರಿದ್ದರು. ಕೊಠಡಿಯೊಳಗಿದ್ದ ನಮ್ಮನ್ನು ಹೊರಗೆ ಬರುವಂತೆ ಬಾಯಿಗೆ ಬಂದಂತೆ ಬೈದರು. ನಂತರ ನಮ್ಮನ್ನು ಕೊಠಡಿಯಿಂದ ಬಲವಂತವಾಗಿ ಹೊರಗೆಳೆದು ಹೊಡೆದರು. ನಂತರ ಆಭರಣ ಹಾಗೂ ಹಣವನ್ನು ದೋಚಿದರು ಎಂದು ಬಾಲಕಿಯ ತಂದೆ ಹೇಳಿಕೊಂಡಿದ್ದಾರೆ.
ನಾನಾಗಲಿ ಅಥವಾ ಕುಟುಂಬವಾಗಲಿ ಯಾರ ಮೇಲೂ ದ್ವೇಷವನ್ನು ಬೆಳೆಸಿಕೊಂಡಿಲ್ಲ. ನಮಗೆ ಯಾರ ಮೇಲೂ ಶತ್ರುತ್ವವಿಲ್ಲ. ನಾನು ಯಾವುದೇ ಜೂಜು, ಕಳ್ಳತನವನ್ನೂ ಮಾಡಿಲ್ಲ. ವೈಯಕ್ತಿಕವಾಗಿಯೂ ಯಾರ ಮೇಲೂ ದ್ವೇಷವನ್ನು ಇಟ್ಟುಕೊಂಡಿಲ್ಲ. ಘಟನೆ ನಡೆದ ಒಂದೂವರೆ ಗಂಟೆಗಳ ಬಳಿಕ ಪೊಲೀಸರು ಸ್ಥಳಕ್ಕೆ ಬಂದಿದ್ದರು ಎಂದು ಅವರು ಹೇಳಿದ್ದಾರೆ.
ಬಾಲಕಿಯ 8 ವರ್ಷದ ಸಹೋದರ ದೀಪಾಂಕರ್ ಮಾತನಾಡಿ, ಮನೆ ಬಾಗಿಲನ್ನು ಹೊಡೆದು ಒಳ ಬಂದ ಕಳ್ಳರು, ಕೊಠಡಿಯ ಬಾಗಿಲು ತೆಗೆಯುವಂತೆ ಹೇಳಿದರು. ನಂತರ ಬಲವಂತವಾಗಿ ನಮ್ನನ್ನು ಹೊರಗೆಳೆದರು. ಅಮ್ಮನನ್ನು ಹೊರಗೆಳೆದು ಅವರಿಗೆ ಹೊಡೆದರು. ನನ್ನ ತಂದೆಗೂ ಹೊಡೆದರು. ನಂತರ ನನ್ನ ಅಕ್ಕಳನ್ನು ಹೊತ್ತೊಯ್ದರು. ಈ ವೇಳೆ ನಾನು ಮತ್ತು ಅಮ್ಮ ಇಬ್ಬರು ಅವರನ್ನು ಹಿಂಬಾಲಿಸಲು ಆರಂಭಿಸಿದೆವು. ಆದರೆ, ಅವರು ನಮಗೆ ಕಾಲಿನಿಂದ ಒದ್ದು ಹಿಂದೆ ಬರದಂತೆ ಮಾಡಿದರು ಎಂದು ಹೇಳಿಕೊಂಡಿದ್ದಾನೆ.
ಘಟನೆ ನಡೆದ ನಂತರ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಮನೆಯಿಂದ 500-600ಮೀ ದೂರದಲ್ಲಿ ಬಾಲಕಿ ದೊರೆತಿದ್ದಾಳೆಂದು ಹೇಳಲಾಗುತ್ತಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಲಖನೌ ಹಿರಿಯ ಪೊಲೀಸ್ ಅಧಿಕಾರಿ ಮಂಜಿಲ್ ಸೈನಿ ಅವರು, ಕಳೆದ ರಾತ್ರಿ 1-2 ಗಂಟೆ ಸುಮಾರಿಗೆ ಘಟನೆ ನಡೆದಿದೆ. 6-7 ಕ್ರಿಮಿನಲ್ ಗಳು ಮನೆಗೆ ನುಗ್ಗಿದ್ದಾರೆ. ಮನೆ ಚಿಕ್ಕದಾಗಿದ್ದು, ಅಂತಹ ದೊಡ್ಡ ಪ್ರಮಾಣದಲ್ಲಿ ದರೋಡೆ ನಡೆದಿಲ್ಲ. ಆದರೆ, 12 ವರ್ಷದ ಬಾಲಕಿಯನ್ನು ಅಪಹರಣ ಮಾಡಿ, 500-600 ಮೀನಷ್ಟು ದೂರ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲನೆ ನಡೆಸಲಾಗಿದೆ. ಬಾಲಕಿ ಹಾಗೂ ಬಾಲಕಿಯ ತಂದೆಯನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಕಳ್ಳರು ರು.2000 ನಗದು ಹಾಗೂ ಕೆಲ ಆಭರಣಗಳನ್ನು ಹೊತ್ತೊಯ್ದಿದ್ದಾರೆ. ಆರೋಪಿಗಳ ವಿರುದ್ಧ ಸೆ.376ಡಿ (ಸಾಮೂಹಿಕ ಅತ್ಯಾಚಾರ), 395 (ದರೋಡೆ) ಮತ್ತು 397 (ದರೋಡೆಯೊಂದಿಗೆ ಕೊಲೆಗೆ ಯತ್ನ) ಎಫ್ಐಆರ್ ಹಾಗೂ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.