ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಯುವತಿಯ ಬಂಧನ
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ 21 ವರ್ಷದ ಯುವತಿಯೊಬ್ಬಳನ್ನು ಬಂಧನಕ್ಕೊಳಪಡಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸೋಮವಾರ...
ಕೊಟ್ಟಾಯಂ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ 21 ವರ್ಷದ ಯುವತಿಯೊಬ್ಬಳನ್ನು ಬಂಧನಕ್ಕೊಳಪಡಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
17 ವರ್ಷದ ತಮ್ಮ ಮಗನನ್ನು ತನ್ನ ಮನೆಯಲ್ಲಿರಿಸಿಕೊಂಡು ಯುವತಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾಳೆಂದು ಬಾಲಕನ ತಾಯಿ ಪೋಸ್ಕೋ ಕಾಯ್ದೆಯಡಿಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಯುವತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಾಲಕನ ತಾಯಿ ದೂರು ನೀಡಿದ ಹಿನ್ನಲೆಯಲ್ಲಿ ರಾಮಪುರಂ ಪೊಲೀಸರು ಯುವತಿಯ ಮನೆಯ ಬಳಿ ಹೋಗಿದ್ದಾರೆ. ಈ ವೇಳೆ ಯುವತಿ ಬಾಗಿಲು ತೆಗೆಯಲು ನಿರಾಕರಿಸಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರು ಬಾಗಿಲನ್ನು ಒಡೆದು ಯುವತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಾಲಕ ಹಾಗೂ ಯುವತಿಯಿಬ್ಬರೂ ಪ್ರೀತಿಗೆ ಬಿದ್ದಿದ್ದು, ಪರಸ್ಪರ ಒಪ್ಪಂದ ಮೇರೆಗೆ ಮನೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮುಖಾಂತರ ಪ್ರೀತಿ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.