ಯೋಧರ ಸ್ಥಿತಿ ಸುಧಾರಿಸಲು ಎಲ್ಲಾ ರೀತಿಯ ಕ್ರಮ: ಕಿರಣ್ ರಿಜಿಜು

ಯೋಧರ ಆರೋಪ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯೋಧರ ಪರಿಸ್ಥಿತಿ ಸುಧಾರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು ಅವರು...
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು
Updated on: 

ನವದೆಹಲಿ: ಯೋಧರ ಆರೋಪ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯೋಧರ ಪರಿಸ್ಥಿತಿ ಸುಧಾರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ಸೇನಾ ಅಧಿಕಾರಿಗಳ ವಿರುದ್ದ ಆರೋಪ ವ್ಯಕ್ತಪಡಿಸಿದ್ದರು. ಸೇನೆಯಲ್ಲಿ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದು, ಯೋಧರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಇದರ ನಡುವೆಯೇ ಮತ್ತೊಬ್ಬ ಸಿಆರ್'ಪಿಎಫ್ ಯೋಧ ಜೀತ್ ಸಿಂಗ್ ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿದ್ದರು,

ಸೇನೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ನಡುವೆ ತಾರತಮ್ಯ ನಡೆಸುತ್ತಿದ್ದು, ಸೇನಾ ಪಡೆಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ನಮಗೂ ಸರ್ಕಾರ ನೀಡಬೇಕಿದೆ. ಸಿಆಱ್ ಪಿಎಫ್ ಯೋಧರೂ ಕೂಡ ಎಲ್ಲಾ ರೀತಿಯ ಸೇವೆಗಳನ್ನು ಮಾಡುತ್ತಿದ್ದಾರೆ, ಲೋಕಸಭೆ, ರಾಜ್ಯಸಭೆ, ವಿಐಪಿ ಮತ್ತು ವಿವಿಐಪಿ ಸೇರಿದಂತೆ ಎಲ್ಲಾ ರೀತಿಯ ಕೆಲಗಳನ್ನು ಮಾಡುತ್ತೇವೆ. ಆದರೆ, ನಮಗೇಕೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದರು.

ಯೋಧರ ಆರೋಪ ಹಾಗೂ ಆಗ್ರಹ ಪ್ರಕರಣಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಿರಣ್ ರಿಜಿಜು ಅವರು, ಪ್ರಕರಣಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಯೋಧರ ಪರಿಸ್ಥಿತಿ ಸುಧಾರಿಸುವ ಕುರಿತಂತೆ ಹಾಗೂ ಆಹಾರ ಪೂರೈಕೆ ಕುರಿತಂತೆ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ಸಾಕಷ್ಟು ವಿಚಾರಗಳು ಕೇಂದ್ರದ ಗಮನಕ್ಕೆ ಬಂದಿದೆ. ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಭವಿಷ್ಯದಲ್ಲಿ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ. ಯೋಧರಿಗೆ ನೀಡುವ ಆಹಾರದ ಗುಣಮಟ್ಟವನ್ನು ಹೆಚ್ಚಿಸುವ ಆಗತ್ಯವಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ರೀತಿಯ ಕ್ರಮ ಕೈಗೊಳ್ಳಲಿದೆ. ಯೋಧರ ಕ್ಷೇಮಕ್ಕಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಯೋಧರ ಕ್ಷೇಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣಗಳ ಸಂಬಂಧ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವರದಿ ಬಂದ ನಂತರವಷ್ಟೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com