

ನವದೆಹಲಿ: ತಮಿಳುನಾಡು ಜನತೆಯ ಒತ್ತಾಯಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ವಿವಾದಿತ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿದ್ದರೂ, ಈಗಲೂ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಮುಂದುವರೆಯುತ್ತಿರವುದಾಗಿ ವರದಿಗಳು ತಿಳಿಸಿವೆ.
ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿರುವ ಕುರಿತಂತೆ ತಮಿಳುನಾಡಿನ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರೀಯ ಸ್ಥಾನವಾಗಿರುವ ಮರೀನಾ ಬೀಚ್ ಬಳಿ ಲಕ್ಷಾಂತರ ಜನರು ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.
ತಮಿಳುನಾಡು ಜನತೆಯ ಪ್ರತಿಭಟನೆಗೆ ಕೊನೆಗೂ ಮಣಿದಿದ್ದ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿತ್ತು. ಅಟರ್ನಿ ಜನರಲ್ ಮುಕುಲ್ ರೋಹ್ಟಗಿ ಸಲಹೆ ನಂತರ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯ ಕರಡು ಪ್ರತಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಕಾನೂನು ಸಚಿವಾಲಯ ಅನುಮೋದನೆ ನೀಡಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಿತ್ತು. ಇದರೊಂದಿಗೆ ಜಲ್ಲಿಕಟ್ಟುಗಾಗಿ ತಮಿಳುನಾಡಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಜಯ ಸಿಕ್ಕಂತಾಗಿದೆ ಎಂದೇ ಹೇಳಲಾಗಿತ್ತು.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಅಸ್ತು ಎಂದಿದ್ದರೂ, ತಮಿಳುನಾಡಿನ ಜನತೆ ಈಗಲೂ ತಮ್ಮ ಪ್ರತಿಭಟನೆಗಳನ್ನು ನಿಲ್ಲಿಸಿಲ್ಲ. ಲಕ್ಷಾಂತರ ಜನರು ಪ್ರಮುಖವಾಗಿ ಯುವಕರು ಈಗಲೂ ಮರೀನಾ ಬೀಚ್ ಬಳಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ನಿನ್ನೆಯಷ್ಟೇ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಹೇಳಿಕೆಯೊಂದನ್ನು ನೀಡಿದ್ದರು. ಜಲ್ಲಿಕಟ್ಟು ನಿಷೇಧ ವಾಪಸ್ ತೆಗೆದುಕೊಳ್ಳು ಕೇಂದ್ರ ಸರ್ಕಾರ ತಿದ್ದುಪಡಿ ತರುವ ಸಾಧ್ಯಗಳಿದ್ದು, ಕೆಲವೇ ದಿನಗಳಲ್ಲಿ ಜಲ್ಲಿಕಟ್ಟು ನಡೆಸಲು ಅನುವು ಮಾಡಿಕೊಡಲಾಗುವುದು. ಹೀಗಾಗಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಗಳಿಂದ ಹಿಂದೆ ಸರಿಯಬೇಕೆಂದು ಹೇಳಿದ್ದರು.
ಇಷ್ಟೆಲ್ಲಾ ಬೆಳವಣಿಗೆಗಳು ನಡೆಸಿದ್ದರೂ ಕೂಡ ತಮಿಳುನಾಡಿನಲ್ಲಿ ಈಗಲೂ ಪ್ರತಿಭಟನೆಗಳು ಮುಂದುವರೆದಿವೆ. ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರು ಕೇಂದ್ರದ ವಿರುದ್ದ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಜನರೊಂದಿಗೆ ಕೆಲ ಪಕ್ಷಗಳೂ ಪ್ರತಿಭಟನೆಗೆ ಸಾಥ್ ನೀಡಿದ್ದು, ರೈಲ್ ರೋಕೋ ಪ್ರತಿಭಟನೆ ಬಳಿಕ ಇದೀಗ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಒಂದು ದಿನದ ಕಾಲ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸ್ಟಾಲಿನ್ ಅವರ ನೇತೃತ್ವದಲಿಲ ಈ ಪ್ರತಿಭಟನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.