

ಚಂಡೀಘಡ: ಪಂಜಾಬ್ ರಾಜ್ಯಕ್ಕೆ ಪಾಕಿಸ್ತಾನವೇ ಮಾದಕ ದ್ರವ್ಯಗಳನ್ನು ರವಾನೆ ಮಾಡುತ್ತಿದ್ದು, ಪಂಜಾಬ್ ಇಂದು ಮಾದಕ ದ್ರವ್ಯ ಪಿಡುಗು ಎದುರಿಸಲು ಪಾಕಿಸ್ತಾನವೇ ನೇರ ಹೊಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ಪಂಜಾಬ್'ನ ಫಜಿಲ್ಕಾ ಜಲ್ಲೆಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿರುವ ಅವರು, ಪಂಜಾಬ್ ರಾಜ್ಯದಲ್ಲಿ ಮಾದಕ ದ್ರವ್ಯ ಪಿಡುಗು ಎದುರಾಗಲು ಪಾಕಿಸ್ತಾನವೇ ಕಾರಣವಾಗದ್ದು, ಮಾದಕ ದ್ರವ್ಯಗಳಿಗೆ ಪ್ರೋತ್ಸಾಹ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಇವುಗಳಿಗೆ ಯಾರೇ ಪ್ರೋತ್ಸಾಹ ನೀಡುತ್ತಿದ್ದರೂ ಅಂತಹವರಿಗೆ ಪಂಜಾಬ್ ಜನತೆ ತಕ್ಕ ಪಾಠವನ್ನು ಕಲಿಸಲಿದ್ದಾರೆಂದು ಹೇಳಿದ್ದಾರೆ.
ಆಹಾರ ಧಾನ್ಯಗಳ ಕುರಿತಂತೆ ಪಂಜಾಬ್ ಸ್ವಾವಲಂಬಿಯಾಗಿಬಿಟ್ಟರೆ, ಪಂಜಾಬ್ ಇಂದು ದೇಶದಲ್ಲಿಯೇ ಉನ್ನತ ಮಟ್ಟದ ಸ್ಥಾನದಲ್ಲಿರುತ್ತಿತ್ತು. ಆದರೆ, ವಿರೋಧ ಪಕ್ಷದವರು ಪಂಜಾಬ್ ಗೆ ಕೆಟ್ಟ ಹೆಸರು ಬರುವಂತಹ ಕೆಲಸಗಳನ್ನುಮಾಡುತ್ತಿದ್ದಾರೆ. ಕೇವಲ ದೇಶದಲ್ಲಿ ಅಷ್ಟೇ ಅಲ್ಲದೆ, ಇಂದು ಪಂಜಾಬ್ ನ ಯುವಕರು ವಿದೇಶಗಳಲ್ಲಿಯೂ ಮಾದಕ ದ್ರವ್ಯಗಳನ್ನು ಸೇವನೆ ಮಾಡುತ್ತಿದ್ದಾರೆ.
ಮಾದಕ ದ್ರವ್ಯ ಪಿಡುಗು ಕುರಿತಂತೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ದೂಷಿಸುತ್ತಿದೆ. ಇದು ಸರಿಯಲ್ಲ. ಇಲ್ಲಿನ ಯುವಕರು ಕೇವಲ ಮಾದಕ ದ್ರವ್ಯವೊಂದಕ್ಕೆ ಚಟರಾಗಿದ್ದಾರೆಯೇ?...ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಚಟಗಳಿಗೆ ಯಾರೂ ಬೇಕಾದರೂ ದಾಸರಾಗಬಹುದು. ಚಟಕ್ಕೆ ಬೀಳುವ ಯುವಕರನ್ನು ದೂಷಿಸಬೇಕೆ ವಿನಃ ರಾಜ್ಯ ಸರ್ಕಾರವನ್ನಲ್ಲ. ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ತಾನದ ಪಾತ್ರ ಕೂಡ ಇದ್ದು, ಪಾಕಿಸ್ತಾನವೇ ಇದಕ್ಕೆ ನೇರಹೊಮೆಯಾಗಿದೆ.
ನೆರೆರಾಷ್ಟ್ರ ಭಾರತದೊಂದಿಗೆ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರತೀಯೊಂದು ಸಮಯದಲ್ಲಿಯೂ ಒಂದಲ್ಲಾ ಒಂದು ತೊಂದರೆಯನ್ನು ನೀಡುತ್ತಲೇ ಇರುತ್ತದೆ. ದೇಶದ ಗೃಹ ಸಚಿವನಾಗಿ ನಿಮಗೆ ಭರವಸೆ ನೀಡುತ್ತಿದ್ದೇನೆ ರಾಜ್ಯದಲ್ಲಿ ಮಾದಕ ದ್ರವ್ಯಕ್ಕೆ ಯಾರೇ ಪ್ರೋತ್ಸಾಹ ನೀಡಿದರೂ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಿಮ್ಮ ಮತವನ್ನು ಎಸ್ಎಡಿ-ಬಿಜೆಪಿಗೆ ನೀಡಿ, ನಾವು ಅಧಿಕಾರಕ್ಕೆ ಬರುವಂತೆ ಮಾಡಿ. ಮಾದಕ ದ್ರವ್ಯಕ್ಕೆ ಯಾವುದೇ ದೊಡ್ಡ ವ್ಯಕ್ತಿಯಾದರೂ, ಯಾವುದೇ ಅಧಿಕಾರದಲ್ಲಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದ್ದಾರೆ.