ಡೋಕ್ಲಾಮ್ ವಿವಾದ: ಸ್ವರಕ್ಷಣೆಗೆ ಭಾರತ ಸಮರ್ಥವಾಗಿದೆ- ಚೀನಾಗೆ ಸುಷ್ಮಾ ಸ್ವರಾಜ್ ಎಚ್ಚರಿಕೆ

Published On :
ನವದೆಹಲಿ: ಬೆದರಿಕೆಗಳಿಗೆ ಬಗ್ಗುವುದಿಲ್ಲ, ಸ್ವರಕ್ಷಣೆಗೆ ಭಾರತ ಸಮರ್ಥವಾಗಿದ್ದು ಚೀನಾ ಮೊದಲು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ.
ಡೋಕ್ಲಾಮ್ ವಿವಾದ ಸಂಬಂಧ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಅವರು ಎತ್ತಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಾತನಾಡಿರುವ ಸುಷ್ಮಾ ಸ್ವರಾಜ್ ಅವರು, ಭಾರತಕ್ಕೆ ಬೆದರಿಕೆ ಹಾಕುತ್ತಿರುವ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.
ಸಿಕ್ಕಿಂನ ಡೋಕ್ಲಾಮ್ ಪ್ರದೇಶದಲ್ಲಿರುವ ವಿವಾದತ ಪ್ರದೇಶ ತ್ರಿರಾಷ್ಟ್ರ (ಭಾರತ-ಚೀನಾ-ಭೂತಾನ್)ಕ್ಕೆ ಸಂಬಧಿಸಿದ್ದು, ಆದರೆ, ಚೀನಾ ತ್ರಿರಾಷ್ಟ್ರ ಗಡಿ ಸಂಧಿ ಸ್ಥಳದ ಯಾಥಾಸ್ಥಿತಿಯನ್ನು ಮಾರ್ಪಾಡು ಮಾಡಲು ಯತ್ನಿಸುತ್ತಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಚೀನಾ ಸಫಲವಾಗಿದ್ದೇ ಆದರೆ, ಭಾರತ ಭದ್ರತೆಗೆ ಬೆದರಿಕೆಗಳು ಎದುರಾಗಲಿದೆ ಎಂದು ಹೇಳಿದ್ದಾರೆ.
ಗಡಿ ಬಿಕ್ಕಟ್ಟು ಬಗೆಹರಿಯಬೇಕಾದರೆ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಚೀನಾ ಆಗ್ರಹಿಸುತ್ತಲೇ. ಆದರೆ, ಚೀನಾದ ಬೆದರಿಕೆಗಳಿಗೆ ಭಾರತ ಬಗ್ಗುವುದಿಲ್ಲ. ಮೊದಲು ಚೀನಾ ಗಡಿ ಪ್ರದೇಶದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು.
ಉಭಯ ರಾಷ್ಟ್ರಗಳ ಸೇನೆ ಹಿಂದಕ್ಕೆ ಸರಿದ ಬಳಿಕವಷ್ಟೇ ಗಡಿ ಬಿಕ್ಕಟ್ಟು ಕುರಿತ ಯಾವುದೇ ವಿಚಾರ ಕುರಿತಂತೆ ಮಾತುಕತೆ ನಡೆಸಲು ಭಾರತ ಸಿದ್ಧವಾಗಿರುತ್ತದೆ. ಭಾರತ ತನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತುಕಗಳು ಸರಿಯಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ತನ್ನನ್ನು ಸಮರ್ಥಿಸಿಕೊಳ್ಳಲು ಭಾರತ ಸಿದ್ಧವಿದೆ. ವಿವಾದ ಸಂಬಂಧ ಕಾನೂನು ಮತ್ತು ಹಕ್ಕುಗಳು ನಮ್ಮ ಕಡಿಗಿದೆ. ಇತರೆ ದೇಶದ ಜನತೆ ಹಾಗೂ ಇತರೆ ರಾಷ್ಟ್ರಗಳು ಭಾರತದ ನಿಲುವನ್ನು ಬೆಂಬಲಿಸಿವೆ. ವಿವಾದಲ್ಲಿ ಚೀನಾ ನಡೆಯನ್ನು ಖಂಡಿಸಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಚೀನಾದ ಮಹತ್ವಾಕಾಂಕ್ಷೆಯ ಒನ್ ರೋಡ್ ಒನ್ ಬೆಲ್ಟ್ ಯೋಜನೆಯಲ್ಲಿ ಯಾವೆಲ್ಲಾ ರಾಷ್ಟ್ರಗಳು ಭಾಗಿಯಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಒಬಿಒಆರ್ ಯೋಜನೆಯಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾ ರಾಷ್ಟ್ರಗಳು ಭಾಗಿಯಾಗಿವೆ ಎಂದು ಹೇಳಿದ್ದಾರೆ.
ಸಿಪಿಇಸಿ ಯೋಜನೆಯು ಚೀನಾದ ಮಹತ್ವಾಕಾಂಕ್ಷೆಯ ಒಬಿಒಆರ್ ಯೋಜನೆಯ ಪ್ರಧಾನ ಭಾಗವಾಗಿದ್ದು, ಇದು ಏಷ್ಟಾ, ಯುರೋಪ್ ಮತ್ತು ಆಫ್ರಿಕಾವನ್ನು ರಸ್ತೆ, ರೈಲು ಮತ್ತು ಬಂದರುಗಳ ಮೂಲಕ ಜೋಡಿಸುವ ಉದ್ದೇಶವನ್ನು ಹೊಂದಿದೆ.
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ, ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ.
ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.
ವಿವಾದ ಸಂಬಂಧ ಹಲವು ದಿನಗಳಿಂದಲೂ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದೆ. ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ಈ ಹಿಂದೆ ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


