ಅಂತರ್ಜಾಲ ಸುದ್ದಿತಾಣ ದಿ ವೈರ್, ಅಮಿತ್ ಶಾ ಪುತ್ರನಿಗೆ ಸೇರಿದ ಟೆಂಪಲ್ ಎಂಟರ್ ಪ್ರೈಸಸ್ ಸಂಸ್ಥೆ ಕೇವಲ ಒಂದೇ ವರ್ಷದಲ್ಲಿ ತನ್ನ ಆದಾಯವನ್ನು 50 ಸಾವಿರ ರೂಗಳಿಂದ 80 ಕೋಟಿಗೆ ಏರಿಸಿಕೊಂಡಿದೆ ಎಂದು ವರದಿ ಮಾಡಿತ್ತು. ಈ ವರದಿ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ಅಮಿತ್ ಶಾ ಪುತ್ರ ತನ್ನ ಸಂಸ್ಥೆಯ ಆದಾಯ ಹೆಚ್ಚಿಸಲು ಪ್ರಭಾವ ಬೀರಿರುವ ಸಾಧ್ಯತೆ ಇದ್ದು, ಈ ಬಗ್ಗೆ ಸರ್ಕಾರ ಕೂಲಂಕುಷ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಜಾರಿ ನಿರ್ದೇಶಾಲಯ ಅಥವಾ ಸಿಬಿಐನಿಂದಲೇ ತನಿಖೆ ನಡೆಸಬೇಕು ಎಂದೂ ಆಗ್ರಹಿಸಿದೆ.
ದೆಹಲಿಯ ಎಐಸಿಸಿ ಪ್ರಧಾನಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೆಲವರ ಜೀವನ ಶೈಲಿಗಳೇ ಬದಲಾಗಿ ಹೋಗಿವೆ. ಕಂಪನಿಗಳ ರಿಜಿಸ್ಟ್ರಾರ್ ನಿಂದಾಗಿ ಅಮಿತ್ ಶಾ ಪುತ್ರ ಜಯ್ ಶಾ ಮಾಲೀಕತ್ವದ ಸಂಸ್ಥೆಯ ದತ್ತಾಂಶಗಳು ಬಹಿರಂಗವಾಗಿದ್ದು, 2014ರ ಬಳಿಕ ಅಂದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಸಂಸ್ಥೆಯ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಅಮಿತ್ ಶಾ ಪುತ್ರ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಸಾದ್ಯತೆ ಇದ್ದು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹುದೇ ಶಂಕೆಯನ್ನು ಆಮ್ ಆದ್ಮಿ ಪಕ್ಷ ಕೂಡ ವ್ಯಕ್ಚಪಡಿಸಿದ್ದು, ತನಿಖೆ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದೆ.