ಕೋಲ್ಕತಾ: ಬಿಜೆಪಿ ಸಿಂಡಿಕೇಟ್ ಹತ್ಯೆಗಳ ಮೂಲಕ ಧಾರ್ಮಿಕ ಭಯೋತ್ಪಾದನೆ ನಡೆಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಪ್ರಧಾನಿ ನರೇಂದ್ರ ಮೋದಿ ಅವರು ಸಿಂಡಿಕೇಟ್ ರಾಜ್ಯ ಹೇಳಿಕೆಗೆ ಸೋಮವಾರ ತಿರುಗೇಟು ನೀಡಿದೆ.
ಇಂದು ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಕಿಸಾನ್ ಕಲ್ಯಾಣ್ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಮಮತಾ ಬ್ಯಾನರ್ಜಿ ನಡೆಸುತ್ತಿರುವ ಸಿಂಡಿಕೇಟ್ ರಾಜಕೀಯದಿಂದಾಗಿ ರಾಜ್ಯದ ಅಭಿವೃದ್ಧಿಯಾಗಿಲ್ಲ. ಸಿಂಡಿಕೇಟ್ ಪಾಲಿಟಿಕ್ಸ್‌ನ ಅನುಮತಿ ಇಲ್ಲದೆ ರಾಜ್ಯದಲ್ಲಿ ಏನೂ ನಡೆಯುವಂತಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಮೋದಿ ಭಾಷಣದ ಬೆನ್ನಲ್ಲೇ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹಾಗೂ ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒ ಬ್ರೇಯಿನ್ ಅವರು, ಬಿಜೆಪಿ ಸಿಂಡಿಕೇಟ್ ಹತ್ಯೆ ನಡೆಸುತ್ತಿದೆ. ಆದರೆ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳ ಸರ್ಕಾರದ ಬಗ್ಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದು ಹೇಳಿದ್ದಾರೆ.
ಸಿಂಡಿಕೇಟ್(ಅಧಿಕಾರಯುಕ್ತ ಗುಂಪು) ಪದದ ಅರ್ಥ ಬಿಜೆಪಿ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ನಿಮ್ಮ ಪಕ್ಷವೇ ಸಿಂಡಿಕೇಟ್. ಆ ಗುಂಪೇ ಧಾರ್ಮಿಕ ಭಯೋತ್ಪಾದನೆ ನಡೆಸುತ್ತಿದೆ. ನಿಮ್ಮ ಪಕ್ಷವೇ ಮತಾಂಧರ ಸಿಂಡಿಕೇಟ್, ನಿಮ್ಮ ಪಕ್ಷವೇ ಕಟುವಾದದ ಸಿಂಡಿಕೇಟ್ ಎಂದು ಟಿಎಂಸಿ ತೀವ್ರ ವಾಗ್ದಾಳಿ ನಡೆಸಿದೆ.
ನಿಮ್ಮ ಪಕ್ಷವೇ ಚಿತ್ರಹಿಂಸೆ ನೀಡುವ ಸಿಂಡಿಕೇಟ್, ನಿಮ್ಮ ಪಕ್ಷವೇ ಏಜೆನ್ಸಿಗಳ ಸಿಂಡಿಕೇಟ್, ನಿಮ್ಮ ಪಕ್ಷವೇ ಭ್ರಷ್ಟಾಚಾರ ಸಿಂಡಿಕೇಟ್ ಎಂದಿರುವ ಟಿಎಂಸಿ, ಬಿಜೆಪಿ ನಾಯಕರು ಬೆಂಕಿ ಜತೆ ಆಟವಾಡಬಾರದು ಎಂದು ಟಿಎಂಸಿ ನಾಯಕರು ಎಚ್ಚರಿಕೆ ನೀಡಿದ್ದಾರೆ.