ಅಸ್ಸಾಂ ನಾಗರೀಕರ ಪರಿಷ್ಕೃತ ಕರಡು ಬಿಡುಗಡೆ: ವರದಿ ಸಂಪೂರ್ಣ ನಿಷ್ಪಕ್ಷಪಾತ- ಗೃಹ ಸಚಿವ
ಅಕ್ರಮ ಬಾಂಗ್ಲಾದೇಶೀಯರ ವಲಸೆಯಿಂದ ತತ್ತರಿಸಿರುವ ಅಸ್ಸಾಂ ರಾಜ್ಯದಲ್ಲಿ ಇರುವವರು ನಿಜವಾದ ಆಸ್ಸಾಮಿಗಳು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಸ್ಸಾಂನ 'ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಾರ್'ಅಂತಿಮ ಕರಡು ಸೋಮವಾರ ಬಿಡುಗಡೆಗೊಂಡಿದ್ದು...
ನವದೆಹಲಿ: ಅಕ್ರಮ ಬಾಂಗ್ಲಾದೇಶೀಯರ ವಲಸೆಯಿಂದ ತತ್ತರಿಸಿರುವ ಅಸ್ಸಾಂ ರಾಜ್ಯದಲ್ಲಿ ಇರುವವರು ನಿಜವಾದ ಆಸ್ಸಾಮಿಗಳು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಸ್ಸಾಂನ 'ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಾರ್'ಅಂತಿಮ ಕರಡು ಸೋಮವಾರ ಬಿಡುಗಡೆಗೊಂಡಿದ್ದು, ಕರಡಿನಲ್ಲಿರುವ ಮಾಹಿತಿ ಹಾಗೂ ವರದಿಗಳು ಸಂಪೂರ್ಣ ನಿಷ್ಪಕ್ಷಪಾತವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಹೇಳಿದ್ದಾರೆ.
ಕರಡು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೆಲವರು ರಾಜ್ಯದ ಜನರಲ್ಲಿ ಭೀತಿ ಹುಟ್ಟಿಸುವ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ವರದಿ ಸಂಪೂರ್ಣ ಸಂಪೂರ್ಣ ನಿಷ್ಪಕ್ಷಪಾತವಾಗಿದೆ. ತಪ್ಪು ಮಾಹಿತಿಗಳನ್ನು, ವದಂತಿಗಳನ್ನು ಹರಡಬಾರದು. ಇದು ಕೇವಲ ಕರಡು ಅಷ್ಟೇ, ಅಂತಿಮ ಪಟ್ಟಿಯಲ್ಲ ಎಂದು ಹೇಳಿದ್ದಾರೆ.
ಅಂತಿಮ ಪಟ್ಟಿಯಲ್ಲಿಯೂ ಕೆಲವರ ಹೆಸರುಗಳು ಬಾರದೇ ಹೋದರೆ ಅಂತಹ ಜನರು ವಿದೇಶಿಯರ ನ್ಯಾಯಮಂಡಳಿ ಮೊರೆ ಹೋಗಬಹುದು. ಯಾರೊಬ್ಬರ ವಿರುದ್ಧವು ದಬ್ಬಾಳಿಕೆ, ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಹೀಗಾಗಿ ಯಾರೂ ಭೀತಿಗೊಳಗಾಗಬಾರದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ನಾಗರಿಕ ನೋಂದಣಿಯು ಇಡೀ ದೇಶಕ್ಕೆ ಸಂಬಂಧಿಸಿದ್ದು, ಇಡೀ ದೇಶದ ನಾಗರೀಕರ ಹೆಸರು ಇದರಲ್ಲಿರುತ್ತದೆ. ಆದರೆ, ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾದೇಶೀಯರ ಹಾವಳಿ ಅಧಿಕವಾಗಿರುವ ಕಾರಣ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಹಿಂಸಾಚಾರ ನಡೆಯುತ್ತಿರುವ ಕಾರಣ ಸುಪ್ರೀಂಕೋರ್ಟ್ ನಿಗಾದಲ್ಲಿ ಅಸ್ಸಾಂ ಸರ್ಕಾರ ರಾಜ್ಯದ ನಾಗರೀಕರ ಪ್ರತ್ಯೇಕ ನೋಂದಣಿ ಕೈಗೊಳ್ಳುತ್ತಿದೆ.
ಅಸ್ಸಾಂ ರಾಜ್ಯದಲ್ಲಿ ಮೊದಲ ಕರಡು ಜ.1 ರಂದು ಬಿಡುಗಡೆಯಾಗಿತ್ತು. ಆಗ 3.29 ಕೋಟಿ ಅರ್ಜಿದಾರರಲ್ಲಿ 1.9 ಕೋಟಿ ಜನರ ಹೆಸರನ್ನು ಸೇರ್ಪಡೆಗೊಳಿಸಲಾಗಿತ್ತು. ಉಳಿದ 2 ಕೋಟಿ ಜನರ ಹಣೆಬರಹ ಇದೀಗ ತೀರ್ಮಾನವಾಗಲಿದೆ. ಹೀಗಾಗಿ ಅಕ್ರಮ ಬಾಂಗ್ಲಾದೇಶೀ ವಲಸಿಗರಿಗೆ ಇದು ಬಿಸಿಮುಟ್ಟಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಅಸ್ಸಾಂ ನಾಗರಿಕರ ನೋಂದಣಿಯಲ್ಲಿ ಹೆಸರು ಇರದೇ ಹೋದವರನ್ನು ಅವರವರ ದೇಶಕ್ಕೆ ಗಡೀಪಾರು ಮಾಡುವ ಸಾಧ್ಯತೆಗಳಿವೆ. ಅಸ್ಸಾಂನಲ್ಲಿ ನೇಪಾಳಿಗರು ಹಾಗೂ ಬಾಂಗ್ಲಾ ವಲಸಿಗರು ಇದ್ದು, ಇವರ ಮೂಲಗಳನ್ನು ಆಧರಿಸಿ ಆಯಾ ದೇಶಗಳಿಗೆ ಗಡೀಪಾರು ಮಾಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ. ಆದರೆ, ಇದಕ್ಕೂ ಮುನ್ನ ಆ ದೇಶಗಳ ಜೊತೆಗೆ ಗಡೀಪಾರು ಒಪ್ಪಂದ ಮಾಡಿಕೊಂಡಿರಬೇಕಾಗುತ್ತದೆ.