ಕೋಲ್ಕತ್ತಾ: ಕಳೆದ ಪಂಚಾಯ್ತಿ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಲ್ಲದೆ ಹಲವರು ಈ ವೇಳೆ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಯುವ ಮುಖಂಡನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೇಸರಿ ಪರ ಕೆಲಸ ಮಾಡುವವರಿಗೆ ಇದೇ ಶಿಕ್ಷೆ ಎಂಬ ನಾಮಫಲಕವನ್ನು ಹಾಕಲಾಗಿದೆ.
ಕಳೆದ ರಾತ್ರಿ ಬಿಜೆಪಿ ಯುವ ಮುಖಂಡ 18 ವರ್ಷದ ತ್ರಿಲೋಚನ್ ಮಹೊಟೊನನ್ನು ಅಪಹರಿಸಲಾಗಿತ್ತು ಈ ಸಂಬಂಧ ತ್ರಿಲೋಚನ್ ಸಹೋದರ ಪೊಲೀಸರಿಗೆ ಅಪಹರಣ ದೂರನ್ನು ನೀಡಿದ್ದರು. ಪೊಲೀಸರು ರಾತ್ರಿಯೆಲ್ಲಾ ಶೋಧ ನಡೆಸಿದ್ದರು ಆತ ಪತ್ತೆಯಾಗಿರಲಿಲ್ಲ. ಆದರೆ ಬೆಳಗಿನ ಜಾವ ಊರಿನ ಹೊರಗಿನ ಮರದ ಕೊಂಬೆಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತನ ದೇಹದ ಹಿಂದೆ ಬೆಂಗಾಲಿ ಭಾಷೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವವರಿಗೆ ಇದೇ ಶಿಕ್ಷೆ ಎಂದು ಬರೆಯಲಾಗಿದೆ. ಸದ್ಯ ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬಿಜೆಪಿ ನಾಯಕನ ಹತ್ಯೆಗೆ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದು, ಬಿಜೆಪಿ ನಾಯಕನ ಹತ್ಯೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ಕಾರಣ. ನಮ್ಮ ಕಾರ್ಯಕರ್ತನನ್ನು ಕ್ರೂರವಾಗಿ ಕೊಲ್ಲಲಾಗಿದೆ. ಇದರಿಂದ ನಮಗೆ ತೀವ್ರ ನೋವಾಗಿದೆ ಎಂದು ಟ್ವೀಟಿಸಿದ್ದಾರೆ.