ತಬ್ಲೀಗ್‌ ಜಮಾತ್‌ನಿಂದ ಹಿಂದಿರುಗಿದ ವ್ಯಕ್ತಿ ಸಾವು: ತಮಿಳುನಾಡಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ತಮಿಳುನಾಡು ರಾಜ್ಯದಲ್ಲಿ ತಬ್ಲೀಘ್ ಜಮಾತ್‌ನಿಂದ ಹಿಂದಿರುಗಿದ್ದ ವ್ಯಕ್ತಿಯೊಬ್ಬರು ಶನಿವಾರ ಬಲಿಯಾಗಿದ್ದು, ಇದರಂತೆ ದೇಶದಲ್ಲಿ ಕೊರೋನಾ ವೈರಸ್'ಗೆ ಬಲಿಯಾದವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಇಂದು ರಾಜ್ಯದಲ್ಲಿ ಸೋಂಕಿನಿಂದ ಎರಡನೇ ಸಾವು ಸಂಭವಿಸಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 411 ತಲುಪಿದೆ.

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ 53 ವರ್ಷ ಪ್ರಾಯದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಊರಿಗೆ ಮರಳಿದ್ದ ಅವರಲ್ಲಿ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಬಳಿಕ ಅವರನ್ನು ವಿಲ್ಲುಪ್ಪುರಂ ಜಿಲ್ಲೆಯ ಮುಂದಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅಲ್ಲಿ ಅವರು ನಿಧನರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಸಂಬಂಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಸಾವು ಇದಾಗಿದೆ.

ಮೃತರು ಜಿಲ್ಲೆಯ ಸಿಂಗರಥೋಪ್ಪುವಿನ ವಂಡಿಮೇಡು ಮೂಲದವರಾಗಿದ್ದು, ವಿ.ಪಗಂಡೈ ಕಿಟ್ಟಿ ರಸ್ತೆಯಲ್ಲಿರುವ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು, ಕೋವಿಡ್-19 ಸೋಂಕಿನ ಲಕ್ಷಣ ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದ 9 ಮಂದಿಯಲ್ಲಿ ಇವರು ಕೂಡ ಒಬ್ಬರಾಗಿದ್ದರು.

ಮಾರ್ಚ್ 26 ರಂದು ಮಧುರೈನ ರಾಜಾಜೈ ಆಸ್ಪತ್ರೆಯಲ್ಲಿ 54 ವರ್ಷದ ವ್ಯಕ್ತಿಯ ಸಾವನ್ನು ಕೊರೋನಾ ಸೋಂಕಿನಿಂದ ಉಂಟಾದ ಮೊದಲ ಸಾವು ಎಂದು ಸರ್ಕಾರದ ದಾಖಲೆಯಲ್ಲಿ ವರದಿಯಾಗಿದೆ.

ರೋಗಿಯು ಸ್ಟೀರಾಯ್ಡ್ ಅವಲಂಬಿತ ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ), ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಅವರು ಸಾವನ್ನಪ್ಪಿದ್ದರು ಎಂದು ಆರೋಗ್ಯ ಸಚಿವ ಡಾ.ಸಿ.ವಿಜಯಬಾಸ್ಕರ್ ಹೇಳಿದ್ದಾರೆ.

ಅವರ ಕುಟುಂಬ ಸದಸ್ಯರೊಬ್ಬರು ಸಹ ಪಾಸಿಟಿವ್ ವರದಿ ಬಂದಿದ್ದು ಅವರನ್ನು ಪ್ರತ್ಯೇಕ ತಡೆ ವ್ಯವಸ್ಥೆಯಲ್ಲಿ ಇಡಲಾಗಿದೆ.

ಈ ನಡುವೆ ಇಂದು ಬೆಳಿಗ್ಗೆಯಷ್ಟೇ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ತಾನ ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಐವರು ಸಾವನ್ನಪ್ಪಿದ್ದರು. ಶುಕ್ರವಾರದವರೆಗೂ 63 ಮಂದಿಯಿದ್ದ ಸಾವಿನ ಸಂಖ್ಯೆ ಶನಿವಾರ 69ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕು ಹಬ್ಬುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ, ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ದಿನದಿಂದ ದಿನಕ್ಕೆ ವೈರಸ್'ಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

ಮಹಾರಾಷ್ಟ್ರದ ಅಮ್ರಾವತಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರು ಕೊರೋನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. 

ಮಧ್ಯಪ್ರದೇಶದ ಛಿಂಡ್ವಾರಾದಲ್ಲಿಯೂ 36 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದು, ಈ ಮೂಲಕ ಆ ರಾಜ್ಯದಲ್ಲಿ ವೈರಸ್'ಗೆ ಸಾವನ್ನಪ್ಪಿದ್ದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಅಲ್ಲದೆ, 155 ಮಂದಿಯಲ್ಲಿ ಸೋಂಕು ದೃಢಪಟ್ಟಿದ ಎಂದು ತಿಳಿದುಬಂದಿದೆ. 

ರಾಜಸ್ತಾನದ ಬಿಕನೇಕ್ ನಲ್ಲಿ 60 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ, ಹೊಸದಾಗಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 12 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜಸ್ತಾನ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 41 ಮಂದಿ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಾಗಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯ ಆಗ್ರಾದಲ್ಲಿ 25 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರಂತೆ ಆಗ್ರಾದಲ್ಲಿ ಸೋಂಕಿತರ ಸಂಖ್ಯೆ 45ಕ್ಕೆ ಏರಿಗೆಯಾಗಿದೆ ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್. ಸಿಂಗ್ ಅವರು ತಿಳಿಸಿದ್ದಾರೆ. 

ಇನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಈ ವರೆಗೂ 335 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 16 ಜನರು ಬಲಿಯಾಗಿದ್ದಾರೆ. 

ಕೇರಳ ರಾಜ್ಯದಲ್ಲಿ 286 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಇಬ್ಬರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 219 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶ ರಾಜ್ಯದಲ್ಲಿ 172 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com