

ಕಣ್ಣೂರು: ಭಾರತೀಯ ಸರ್ಕಸ್‌ನ ಪ್ರವರ್ತಕ ಮತ್ತು ಜೆಮಿನಿ ಸರ್ಕಸ್‌ನ ಸಂಸ್ಥಾಪಕ ಜೆಮಿನಿ ಶಂಕರನ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಸೋಮವಾರ ತಿಳಿಸಿವೆ.
ಅವರಿಗೆ 99 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶಂಕರನ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಭಾರತೀಯ ಸರ್ಕಸ್ ಅನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಶಂಕರನ್ ಅವರನ್ನು ಶ್ಲಾಘಿಸಿದರು.
'ಅವರು ಭಾರತೀಯ ಸರ್ಕಸ್ ಅನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ವಿದೇಶಿ ಪ್ರದರ್ಶಕರು ಮತ್ತು ಅವರ ತಂತ್ರಗಳನ್ನು ಸೇರಿಸಿದರು'. ಪ್ರಗತಿಪರ ದೃಷ್ಟಿಕೋನ ಹೊಂದಿದ್ದ ಶಂಕರನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಗಿ ಹೇಳಿದರು.
ಶಂಕರನ್ ಅವರು ವಿವಿಧ ಪ್ರಧಾನಿಗಳು, ರಾಷ್ಟ್ರಪತಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಅವರ ನಿಧನದಿಂದ ದೇಶದ ಸರ್ಕಸ್ ಕಲೆಗೆ ಅಪಾರ ನಷ್ಟವಾಗಿದೆ ಎಂದು ವಿಜಯನ್ ಹೇಳಿದರು.
1924 ರಲ್ಲಿ ಜನಿಸಿದ ಶಂಕರನ್, ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರ ಬಳಿ ಮೂರು ವರ್ಷ ತರಬೇತಿ ಪಡೆದರು ಮತ್ತು ನಂತರ ಮಿಲಿಟರಿಗೆ ಸೇರಿ ಎರಡನೇ ಮಹಾಯುದ್ಧದ ನಂತರ ನಿವೃತ್ತರಾದರು.
ದೇಶದಾದ್ಯಂತ ವಿವಿಧ ಸರ್ಕಸ್ ಗುಂಪುಗಳೊಂದಿಗೆ ಕೆಲಸ ಮಾಡಿದ ನಂತರ, ಅವರು 1951ರಲ್ಲಿ ವಿಜಯಾ ಸರ್ಕಸ್ ಕಂಪನಿಯನ್ನು ಖರೀದಿಸಿದರು ಮತ್ತು ಅದನ್ನು ಜೆಮಿನಿ ಸರ್ಕಸ್ ಎಂದು ಮರುನಾಮಕರಣ ಮಾಡಿದರು. ನಂತರ, ಅವರು ತಮ್ಮ ಎರಡನೇ ಜಂಬೋ ಸರ್ಕಸ್ ಕಂಪನಿಯನ್ನು ಪ್ರಾರಂಭಿಸಿದರು.
ದೇಶದಲ್ಲಿ ಸರ್ಕಸ್‌ಗೆ ಅವರ ಒಟ್ಟಾರೆ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶಂಕರನ್ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಮಂಗಳವಾರ ಪಯ್ಯಂಬಲಂ ಬೀಚ್‌ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.