

ನವದೆಹಲಿ: ಭಾರತ ಮತ್ತು ಚೀನಾ ನರಕದ ಕೂಪ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಯೂಟರ್ನ್ ಹೊಡೆದಿದ್ದು, ಇಂಡಿಯಾವನ್ನು ಹಾಡಿ ಹೊಗಳಿದ್ದಾರೆ.
ಭಾರತ ಅತ್ಯಂತ ಶ್ರೇಷ್ಠ ದೇಶವಾಗಿದ್ದು, ಆ ದೇಶವನ್ನು ಮುನ್ನಡೆಸುವ ಪ್ರಧಾನಿ ಮೋದಿ ತಮಗೆ "ಉತ್ತಮ ಸ್ನೇಹಿತ" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್, ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಷಿಯಲ್’ನಲ್ಲಿ ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಬರೆದ ವಿವಾದಾತ್ಮಕ ಪತ್ರವನ್ನು ಮರು ಪೋಸ್ಟ್ ಮಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಸ್ಯಾವೇಜ್ ಪತ್ರಕ್ಕೆ ಧ್ವನಿಗೂಡಿಸಿದ ಟ್ರಂಪ್, ಭಾರತ, ಚೀನಾ ಮತ್ತು ಇತರ ರಾಷ್ಟ್ರಗಳನ್ನು "ನರಕ ಕೂಪಗಳು" ಎಂದು ಕಟುವಾಗಿ ಟೀಕಿಸಿದ್ದರು.
ಅಮೆರಿಕನ್ನರ ಉದ್ಯೋಗಗಳನ್ನು ಭಾರತೀಯರು ಮತ್ತು ಚೀನಿಯರು ಕಬಳಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರು ಲ್ಯಾಪ್ ಟಾಪ್ ಮೂಲಕ ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಟ್ರಂಪ್ ದೂರಿದ್ದಾರೆ.
ಟ್ರಂಪ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್, ಅಮೆರಿಕ ಅಧ್ಯಕ್ಷರು ಭಾರತದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಇದನ್ನು ಒಂದು ದೊಡ್ಡ ರಾಷ್ಟ್ರ ಎಂದು ಹೇಳಿದ್ದಾರೆ ಮತ್ತು ಅದರ ನಾಯಕನೊಂದಿಗೆ ವೈಯಕ್ತಿಕ ಸ್ನೇಹವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು.
"ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶವಾಗಿದೆ" ಎಂದು ಟ್ರಂಪ್ ಹೇಳಿದ್ದಾರೆ.
Advertisement