

ನವದೆಹಲಿ: ಲಿಫ್ಟ್ ನಲ್ಲಿರುವಾಗ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ.. ಸಾಕಷ್ಟು ಬಾರಿ ಲಿಫ್ಟ್ ಗಳಲ್ಲಿ ದೊಡ್ಡವರೇ ಅಪಾಯಕ್ಕೆ ಸಿಲುಕಿದ್ದ ಪ್ರಸಂಗಗಳಿವೆ.
ಆದರೆ ಇಲ್ಲೊಂದು ಘಟನೆಯಲ್ಲಿ ಲಿಫ್ಟ್ ಬಾಗಿಲು ದಿಢೀರ್ ಮುಚ್ಚಿ ಅದರೊಳಗಿದ್ದ ಇಬ್ಬರು ಮಕ್ಕಳನ್ನು ಪುಟ್ಟ ಬಾಲಕಿಯೊಬ್ಬಳು ರಕ್ಷಣೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಲಿಫ್ಟ್ನಲ್ಲಿ ಸಿಲುಕಿಕೊಳ್ಳುವ ಹಂತದಲ್ಲಿದ್ದ ಇಬ್ಬರು ಮಕ್ಕಳನ್ನು ಹತ್ತು ವರ್ಷದ ಬಾಲಕಿಯೊಬ್ಬಳು ತನ್ನ ಅದ್ಭುತ ಸಮಯ ಪ್ರಜ್ಞೆಯಿಂದ ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಘಟನೆ ಏನು?
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮೂವರು ಮಕ್ಕಳು ಲಿಫ್ಟ್ ಹತ್ತಿರ ನಿಂತಿದ್ದರು. ಈ ವೇಳೆ ಲಿಫ್ಟ್ ಇದ್ದಕ್ಕಿಂದ್ದತೆಯೇ ಬಾಗಿಲು ಮುಚ್ಚಿಕೊಂಡಿದೆ. ಈ ವೇಳೆ ಲಿಫ್ಟ್ ನ ಹೊರಗೆ ನಿಂತಿದ್ದ ಬಾಲಕಿ ಕೂಡಲೇ ತನ್ನ ಕೈ ಮತ್ತು ಕಾಲುಗಳನ್ನು ಹಾಕಿ ಲಿಫ್ಟ್ ಬಾಗಿಲು ಸಂಪೂರ್ಣ ಮುಚ್ಚದಂತೆ ತಡೆದಿದ್ದಾರೆ. ಈ ವೇಳೆ ಸ್ಥಳೀಯರು ಆಕೆಯ ನೆರವಿಗೆ ಬಂದಿದ್ದು, ಲಿಫ್ಟ್ ಬಾಗಿಲುಗಳನ್ನು ಬಲವಂತವಾಗಿ ತೆರೆದಿದ್ದಾರೆ.
ಬಾಲಕಿ ಸಮಯ ಪ್ರಜ್ಞೆ
ಅತ್ತ ಬಾಲಕಿ ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಒಳಗಿದ್ದ ಇಬ್ಬರು ಪುಟ್ಟ ಮಕ್ಕಳನ್ನು ಎಳೆದುಕೊಂಡು ಲಿಫ್ಟ್ ನಿಂದ ಹೊರಕ್ಕೆ ಕಳುಹಿಸುತ್ತಾರೆ. ಬಳಿಕ ಬಾಲಕಿ ಕೂಡ ಹೊರಗೆ ಹೋಗುತ್ತಲೇ ಲಿಫ್ಟ್ ಬಾಗಿಲು ಹಾಕಿಕೊಳ್ಳುತ್ತದೆ. ಆ ಮೂಲಕ ಬಾಲಕಿ ಇಬ್ಬರು ಮಕ್ಕಳನ್ನು ರಕ್ಷಿಸಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ವಿಡಿಯೋ ವ್ಯಾಪಕ ವೈರಲ್
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಒಬ್ಬ ಬಳಕೆದಾರರು ಬಾಲಕಿಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೋಡಿ ಬೆರಗಾಗಿದ್ದು, ಆಕೆಯನ್ನು ರಿಯಲ್ ಲೈಫ್ ಸೂಪರ್ ಹೀರೋ ಎಂದು ಬಣ್ಣಿಸಿದ್ದಾರೆ.
ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ತಾರ್ಕಿಕ ಆಲೋಚನೆ ಮತ್ತು ಧೈರ್ಯ ತೋರುವುದು ಸುಲಭವಲ್ಲ. ಆಕೆ ಕೇವಲ ಬಾಗಿಲು ಮುಚ್ಚಲಿಲ್ಲ, ಇಬ್ಬರ ಜೀವ ಉಳಿಸಿದಳು ಎಂದು ಮತ್ತೊಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Advertisement