

ಮುಂಬೈ: ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ವಿಡಿಯೋದಲ್ಲಿ ಯುವಕನೊಬ್ಬ, ಯುವತಿಯ ಕಾಲಿ ಬಿದ್ದು ಪ್ಲೀಸ್ ನನ್ನ ಬಿಟ್ಟು ಹೋಗಬೇಡ ಎಂದು ಕೇಳಿಕೊಳ್ಳುತ್ತಿರುವ ಭಾವನಾತ್ಮಕ ದೃಶ್ಯವನ್ನು ಸೆರೆಹಿಡಿಯಲಾಗಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರ್ ಆಗಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ವಿಡಿಯೋ ಕ್ಲಿಪ್‌ನಲ್ಲಿ ತಿಳಿ ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಯುವಕನೊಬ್ಬ ಪ್ಲಾಟ್‌ಫಾರ್ಮ್‌ನಲ್ಲಿ, ಯುವತಿ ರೈಲು ಹತ್ತಲು ಹೊರಡುತ್ತಿದ್ದಂತೆ ಆಕೆಯ ಕಾಲಿಗೆ ಬಿದ್ದು, ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟು ಹೋಗದಂತೆ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಮುಖಕ್ಕೆ ಶಾಲು ಮುಚ್ಚಿಕೊಂಡು ಬೆನ್ನಿಗೆ ಬ್ಯಾಗ್ ಹಾಕಿಕೊಂಡಿರುವ ಹಸಿರು ಮತ್ತು ಬಿಳಿ ಮಿಶ್ರಿತ ಉಡುಪಿನ ಯುವತಿ, ಆತನ ಹಿಡಿತದಿಂದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿದ್ದರೂ, ಆತ ಮಾತ್ರ ಯಾವುದೇ ಕಾರಣಕ್ಕೂ ಆಕೆಯ ಕಾಲನ್ನು ಬಿಡದೆ ಹಠ ಹಿಡಿದು ಪ್ಲಾಟ್‌ಫಾರ್ಮ್ ಮೇಲೆಯೇ ಬಿದ್ದಿರುವ ಈ ದೃಶ್ಯ ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಆ ಯುವಕ ತನ್ನ ಪ್ರೇಯಸಿ ತನ್ನನ್ನು ಬಿಟ್ಟು ಹೋಗದಂತೆ ಮತ್ತು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆದರೆ, ಈ ವಿಡಿಯೋದ ಅಧಿಕೃತ ಮೂಲದ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಪ್ಲಾಟ್‌ಫಾರ್ಮ್ ಮೇಲೆ ಈ ಹೈಡ್ರಾಮ ನಡೆಯುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸಾರ್ವಜನಿಕರು ಇದನ್ನು ಕುತೂಹಲದಿಂದ ನೋಡಲು ಆರಂಭಿಸಿದರು. ಜನಸಂದಣಿ ಹೆಚ್ಚಾಗುತ್ತಿದ್ದನ್ನು ಗಮನಿಸಿದ ರೈಲ್ವೇ ರಕ್ಷಣಾ ಪಡೆ (RPF) ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಸುತ್ತುವರೆದರು. ಒಬ್ಬ ಅಧಿಕಾರಿ ಇಬ್ಬರ ನಡುವೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೆ, ಮತ್ತೊಬ್ಬ ಅಧಿಕಾರಿ ಅಲ್ಲಿ ಜಮಾಯಿಸಿದ್ದ ಜನರನ್ನು ಆ ಜಾಗದಿಂದ ದೂರ ಸರಿಯುವಂತೆ ಸೂಚಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಿಡಿಯೋದ ಮತ್ತೊಂದು ಭಾಗದಲ್ಲಿ, ಸಮವಸ್ತ್ರಧಾರಿ ಪೊಲೀಸರು ಪ್ಲಾಟ್‌ಫಾರ್ಮ್ ಮೇಲೆ ಕುಳಿತಿದ್ದ ಆ ಯುವಕನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವುದು ದಾಖಲಾಗಿದೆ.
ಈ ಬಗ್ಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ಪ್ರೀತಿ ಎನ್ನುವುದು ಇಬ್ಬರ ನಡುವೆ ಇರಬೇಕಾದ ವಿಚಾರ. ಯಾರನ್ನಾದರೂ ನಿಮ್ಮನ್ನು ಪ್ರೀತಿಸುವಂತೆ ಅಥವಾ ನಿಮ್ಮ ಜೊತೆಗೇ ಇರುವಂತೆ ಬಲವಂತ ಮಾಡಲು ಸಾಧ್ಯವಿಲ್ಲ. ಯಾರಾದರೂ ನಿಮ್ಮನ್ನು ಬಿಟ್ಟು ಹೋಗಲು ಬಯಸಿದರೆ, ಅವರಿಗೆ ಹೋಗಲು ಬಿಡಿ. ನಿಮಗಾಗಿ ಮತ್ತು ಅವರಿಗಾಗಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಇದೊಂದೇ. ಪ್ರೀತಿಗಾಗಿ ಎಂದಿಗೂ ಭಿಕ್ಷೆ ಬೇಡಬೇಡಿ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಅನೇಕರು ಸಾರ್ವಜನಿಕ ಮತ್ತು ಕಿಕ್ಕಿರಿದ ಜಾಗದಲ್ಲಿ ಇಂತಹ ವರ್ತನೆ ತೀರಾ ಅನುಚಿತ ಮತ್ತು ಜನರಿಗೆ ತೊಂದರೆ ಉಂಟುಮಾಡುವಂತದ್ದು ಎಂದು ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.