

ಜಮ್ಮು: ಉಗ್ರರ ವಿರುದ್ಧ ಭಾರತೀಯ ಸೇನಾಪಡೆ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ನಡುವಲ್ಲೇ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಲ್ಲಿ ಸೋಮವಾರ ಮುಂಜಾನೆ ನಿಗೂಡ ಸ್ಫೋಟ ಸಂಭವಿಸಿದ್ದು, ಇದರ ಬೆನ್ನಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸಾಂಬಾ ಜಿಲ್ಲೆಯ ಘಗ್ವಾಲ್ ಪ್ರದೇಶದ ಗವಾಲಾ ತಲಾಬ್ ಗ್ರಾಮದಲ್ಲಿ, ಮಾಜಿ ಸರ್ಪಂಚ್ ಜೈ ರಾಮ್ ಶರ್ಮಾ ಅವರ ಮನೆಯ ಹೊರಭಾಗದಲ್ಲಿ ಈ ಸ್ಫೋಟ ಸಂಭವಿಸಿದೆ.
ಅಂತರರಾಷ್ಟ್ರೀಯ ಗಡಿಗೆ ಸುಮಾರು 10 ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ತಡ ರಾತ್ರಿ ಸುಮಾರು 2 ಗಂಟೆಗೆ ಸ್ಫೋಟ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಪರಿಣಾಮ ಮನೆಯ ಮುಖ್ಯ ಗೇಟ್ ಸಂಪೂರ್ಣವಾಗಿ ಧ್ವಂಸವಾಗಿದ್ದು, ಸುತ್ತಲಿನ ಕಾಂಪೌಂಡ್ ಗೋಡೆಯ ಭಾಗವೂ ಹಾನಿಗೊಂಡಿದೆ. ಆದರೆ, ಅದೃಷ್ಟವಶಾತ್ ಯಾವುದೇ ಸಾವು-ನೋವುಗಲು ಸಂಭವಿಸಿಲ್ಲ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಫೋಟದ ಮೂಲ ಮತ್ತು ಕಾರಣ ಪತ್ತೆಹಚ್ಚಲು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ತನಿಖೆ ಮುಂದುವರಿಸಿದ್ದಾರೆ. ಸ್ಫೋಟದ ಹಿಂದೆ ಇರುವ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಬೆನ್ನಲ್ಲೇ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
Advertisement