ಕೈಮುಗಿದು ಬೇಡಿದರೂ ಬಿಡುಗಡೆ ಮಾಡಲಿಲ್ಲ, ಅಜ್ಜಿಯ ಅಂತ್ಯಕ್ರಿಯೆ ದೀಪ್ಕೆ ಗೈರು: ದೆಹಲಿ ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ..!

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪ್ಕೆ ಅವರ ತಂದೆಯ ಕಡೆಯ ಅಜ್ಜಿ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ (85) ಶನಿವಾರ ಮೃತಪಟ್ಟಿದ್ದರು. ಭಾನುವಾರ ಬೆಳಿಗ್ಗೆ ಅವರ ಅಂತ್ಯಕ್ರಿಯೆ ನೆರವೇರಿತು.
Abhijit Dipke
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಖ್ಯಸ್ಥ ಅಭಿಜೀತ್ ದೀಪ್ಕೆOnline Desk
Updated on: 

ನವದೆಹಲಿ: ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಬಿಡುಗಡೆ ಮಾಡದೆ ತಡೆದಿದ್ದಾರೆ ಎಂಬ ಕುಟುಂಬದ ಆರೋಪವನ್ನು ದೆಹಲಿ ಪೊಲೀಸರು ಭಾನುವಾರ ತಳ್ಳಿಹಾಕಿದ್ದಾರೆ.

ಅಜ್ಜಿಯ ಸಾವಿನ ಬಗ್ಗೆ ದೀಪ್ಕೆ ಅವರಿಗೆ ತಕ್ಷಣ ಮಾಹಿತಿ ನೀಡಲಾಗಿತ್ತು. ಸ್ವಗ್ರಾಮಕ್ಕೆ ತೆರಳಲು ಅಗತ್ಯ ನೆರವು ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ, ಅವರು ಆ ನೆರವನ್ನು ನಿರಾಕರಿಸಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು CJP ಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ದೆಹಲಿಗೆ ಬಂದಿಳಿದ ವಿಮಾನದೊಳಗಿಂದಲೇ CJP ನಾಯಕ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಮೂವರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪ್ಕೆ ಅವರ ತಂದೆಯ ಕಡೆಯ ಅಜ್ಜಿ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ (85) ಶನಿವಾರ ಮೃತಪಟ್ಟಿದ್ದರು. ಭಾನುವಾರ ಬೆಳಿಗ್ಗೆ ಅವರ ಅಂತ್ಯಕ್ರಿಯೆ ನೆರವೇರಿತು.

ಅಜ್ಜಿ ಮೃತಪಟ್ಟ ಬಳಿಕ ಅಭಿಜೀತ್‌ನನ್ನು ಬಿಡುಗಡೆ ಮಾಡುವಂತೆ ನಾವು ದೆಹಲಿ ಪೊಲೀಸರಿಗೆ ಹಲವು ಬಾರಿ ಮನವಿ ಮಾಡಿದೆವು. ಆದರೆ, ಅವರು ಬಿಡುಗಡೆ ಮಾಡಲಿಲ್ಲ” ಎಂದು ಅಂತ್ಯಕ್ರಿಯೆಗೂ ಮುನ್ನ ಕುಟುಂಬದ ಸದಸ್ಯರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ, ಕುಟುಂಬದ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಪೊಲೀಸರು, ಶನಿವಾರ ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ದೀಪ್ಕೆ ಅವರಿಗೆ ಅಜ್ಜಿಯ ಸಾವಿನ ಮಾಹಿತಿ ಮತ್ತು ಅಂತ್ಯಕ್ರಿಯೆಯ ಸಮಯವನ್ನು ತಕ್ಷಣ ತಿಳಿಸಲಾಗಿತ್ತು ಎಂದು ಹೇಳಿದ್ದಾರೆ. ಸ್ವಗ್ರಾಮಕ್ಕೆ ಪ್ರಯಾಣಿಸಲು ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವುದಾಗಿ ತಿಳಿಸಲಾಗಿತ್ತು ಎಂದೂ ಸ್ಪಷ್ಟಪಡಿಸಿದ್ದಾರೆ.

Abhijit Dipke
ಈ ಹೋರಾಟ ನಿಮ್ಮೊಬ್ಬರದ್ದಲ್ಲ: CJP ಪ್ರತಿಭಟನೆಗೆ ಬಾಂಗ್ಲಾ ನಾಯಕ ನಹಿದ್ ಇಸ್ಲಾಂ ಬೆಂಬಲ: ಈ ಹೋರಾಟ ನಿಮ್ಮೊಬ್ಬರದ್ದಲ್ಲ ಎಂದ ಎನ್‌ಸಿಪಿ

ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸೂಕ್ಷ್ಮತೆ ಮತ್ತು ಮಾನವೀಯತೆಯಿಂದ ದೀಪ್ಕೆ ಅವರಿಗೆ ಸಾವಿನ ಮಾಹಿತಿ ನೀಡಲಾಗಿತ್ತು. ಅಂತ್ಯಕ್ರಿಯೆಯ ನಿಗದಿತ ಸಮಯವನ್ನೂ ತಿಳಿಸಲಾಗಿತ್ತು.

ಮಾನವೀಯತೆಯ ಆಧಾರದ ಮೇಲೆ ಅವರು ಸ್ವಗ್ರಾಮಕ್ಕೆ ತೆರಳಲು ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಅವರು ಆ ನೆರವನ್ನು ಪಡೆಯಲು ನಿರಾಕರಿಸಿದರು ಎಂದು ತಿಳಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ದೀಪ್ಕೆ ಅವರ ಚಿಕ್ಕಪ್ಪ ವಿಲಾಸ್ ದೀಪ್ಕೆ, ಕುಟುಂಬದವರು ಪದೇಪದೆ ಬಿಡುಗಡೆಗೆ ಮನವಿ ಮಾಡಿದ್ದರೂ ಪೊಲೀಸರು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ಅಂತ್ಯಕ್ರಿಯೆಗಾಗಿ ನಾವು ಅಭಿಜೀತ್‌ಗಾಗಿ ಕಾಯುತ್ತಿದ್ದೆವು. ಆತನನ್ನು ಬಿಡುಗಡೆ ಮಾಡುವಂತೆ ದೆಹಲಿ ಪೊಲೀಸರ ಮುಂದೆ ಕನಿಷ್ಠ 10 ಬಾರಿ ಕೈಮುಗಿದು ಮನವಿ ಮಾಡಿದ್ದೆ. ಕೊನೆಗೂ ಇಂದು ಆತನನ್ನು ಬಿಡುಗಡೆ ಮಾಡಲಾಯಿತು. ಆದರೆ, ಅಷ್ಟರಲ್ಲಾಗಲೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಮಯ ಮೀರಿಹೋಗಿತ್ತು ಎಂದು ಹೇಳಿದ್ದಾರೆ.

ಕನಿಷ್ಠ ಪಕ್ಷ ಅಜ್ಜಿಯ ಚಿತಾಭಸ್ಮವನ್ನು ಸಂಗ್ರಹಿಸಲು ತನ್ನ ಸೋದರಳಿಯನಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ದೀಪ್ಕೆ, ರಂಕಾ ಮತ್ತು ದಾಸ್ ಅವರನ್ನು ದೆಹಲಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಒಂದು ವರ್ಷದವರೆಗೆ “ಶಾಂತಿಭಂಗ ಮಾಡುವುದಿಲ್ಲ” ಎಂಬ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು CJPಯ ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ತಿಳಿಸಿದ್ದಾರೆ.

ಕಾರ್ಯವಿಧಾನಕ್ಕೆ ಸಂಬಂಧಿಸಿದ ಅಗತ್ಯತೆಗಳು ಮತ್ತು ನವದೆಹಲಿ ಪ್ರದೇಶದಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆಗಳನ್ನು ಉಲ್ಲೇಖಿಸಿ CJP ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಇದೀಗ ಪಕ್ಷವು ಭಾನುವಾರವೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ತನ್ನ ಕರೆಯನ್ನು ಪುನರುಚ್ಚರಿಸಿದೆ. ರಾಜಧಾನಿಯಲ್ಲಿ ಬಿಗಿ ಭದ್ರತೆ ಮುಂದುವರಿದಿದ್ದು, ವರದಿಯ ಪ್ರಕಾರ 30,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲು ಉದ್ದೇಶಿಸಲಾಗಿತ್ತು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು CJP ಮತ್ತು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.ಮೂವರು ನಾಯಕರ ಬಿಡುಗಡೆಗೆ ಪ್ರತಿಕ್ರಿಯಿಸಿರುವ CJP, ಇದನ್ನು “ಪ್ರಮುಖ ಕಾನೂನು ವಿಜಯ” ಎಂದು ಬಣ್ಣಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com