

ಶಿವಮೊಗ್ಗ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವಂತೆ ಶಿವಮೊಗ್ಗದ ಕಾಂಗ್ರೆಸ್ ಮುಖಂಡರಾದ ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಗೆ ಸಿದ್ಧರಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಲಿದ್ದಾರೆ ಎಂದು ವರದಿ ಮಾಡಿದೆ. ಇಂದು ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ರಾಜ್ಯಾಧ್ಯ ಬಿಎಸ್ ಯಡಿಯೂರಪ್ಪ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ನಿವಾಸಕ್ಕೆ ತೆರಳಿದ್ದ ಕುಮಾರ್ ಬಂಗಾರಪ್ಪ ಅವರು ಯಡಿಯೂರಪ್ಪ ಅವರಿಗೆ ಶುಭ ಕೋರಿದ್ದಾರೆ.
ಈ ವೇಳೆ ಮಾತನಾಡಿದ ಅವರು ಬಿಎಸ್ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು, ಅವರೊಡನೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಹೀಗಾಗಿ ಈ ಬಗ್ಗೆ ಶೀಘ್ರದಲ್ಲೇ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡುತ್ತೇನೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಹಿಂದಷ್ಟೇ ಸಚಿವ ಸ್ಥಾನ ಕಳೆದುಕೊಂಡಿದ್ದ ನಂಜನಗೂಡು ಶಾಸಕ ಹಾಗೂ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಕೂಡ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು.