ರಾಜಕೀಯ

ಮತ್ತೆ ರಾಜಕೀಯ ರಣಾಂಗಣಕ್ಕೆ ಸಜ್ಜು: ಆ.9 ರಿಂದ ಯಡಿಯೂರಪ್ಪ ಯಾತ್ರೆ, 13 ರಂದು ರಾಹುಲ್ ಕಹಳೆ

ಮತ್ತೆ ರಾಜಕೀಯ  ರಣಾಂಗಣಕ್ಕೆ ಸಜ್ಜು: ಆ.9 ರಿಂದ ಯಡಿಯೂರಪ್ಪ ಯಾತ್ರೆ, 13 ರಂದು ರಾಹುಲ್ ಕಹಳೆ
ರಾಹುಲ್ ಗಾಂಧಿ, ಬಿ.ಎಸ್ .ಯಡಿಯೂರಪ್ಪ
Published On :

ಬೆಂಗಳೂರು: ವಿಧಾನಸಭಾ ಚುನಾವಣೆ ನಂತರ ಸ್ವಲ್ಪ ವಿರಾಮ ಪಡೆದುಕೊಂಡಿದ್ದ ಮೂರು  ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು  ಮತ್ತೆ 2019ರ ಲೋಕಸಭಾ ಚುನಾವಣೆ ರಣಾಂಗಣಕ್ಕೆ ಸಜ್ಜುಗೊಳುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ  ಇದೇ ತಿಂಗಳ 9 ರಿಂದ  ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಿಂದ ಯಾತ್ರೆ ಆರಂಭಿಸಲಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ ಯಡಿಯೂರಪ್ಪ ಒಂದು ವಾರಗಳ ಕಾಲ ಯಾತ್ರೆ ನಡೆಸಲಿದ್ದಾರೆ.

 ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಕೊಡಿಸುವಲ್ಲಿ  ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಮೌನ ಹಾಗೂ ಇತ್ತೀಚಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಲಾಭ ಮಾಡಿಕೊಳ್ಳಲು ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ.

ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ. ಆಗಸ್ಟ್ 13 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಬೀದರ್ ಗೆ ಆಗಮಿಸಲಿದ್ದು,  ರೈತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಸಿದ್ದತೆಗೆ ಚಾಲನೆ ನೀಡಲಿದ್ದಾರೆ.

ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ಬೀದರ್ ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು 2 ಲಕ್ಷ ರೈತರು ಆಗಮಿಸುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೂತ್ ಮಟ್ಟದಲ್ಲಿ ಬಿಜೆಪಿ ಅನುಸರಿಸಿದ ಚುನಾವಣಾ ನಿರ್ವಹಣಾ ವ್ಯವಸ್ಥೆಯಂತೆ ಕಾಂಗ್ರೆಸ್  ಕೂಡಾ  ಪಕ್ಷ ಸಂಘಟನೆಗೆ ಒತ್ತು ಕೊಡಲು ಮುಂದಾಗಿದ್ದು,   ಒಂದು ಮತಗಟ್ಟೆಗೆ 25 ಯುವಕರನ್ನು ನಿಯೋಜಿಸಲಾಗುತ್ತಿದ್ದು, ಇದರಲ್ಲಿ ಕಡ್ಡಾಯವಾಗಿ  ಪರಿಶಿಷ್ಟ ಜಾತಿ, ದಲಿತ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ.

ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಶಕ್ತಿ ಆಪ್ ಬಿಡುಗಡೆ ಮಾಡಲಾಗಿದ್ದು, ಅದರ ಮೂಲಕ  ಪಕ್ಷ ಸಂಘಟನೆ ಕುರಿತಂತೆ  ಸಲಹೆ , ಅಭಿಪ್ರಾಯಗಳನ್ನು ಕಾರ್ಯಕರ್ತರು ನೀಡಬಹುದಾಗಿದೆ.

ಜೆಡಿಎಸ್ ಕೂಡಾ  ಅಗತ್ಯ ಸಿದ್ದತೆಯಲ್ಲಿ ತೊಡಗಿದ್ದು, ದೇವೇಗೌಡರ ಮಾರ್ಗದರ್ಶನದಂತೆ  ಹೆಚ್ . ವಿಶ್ವನಾಥ್ ಅವರನ್ನು  ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೊಸ ಪದಾಧಿಕಾರಿಗಳ ತಂಡ ಶೀಘ್ರದಲ್ಲಿ ಘೋಷಣೆಯಾಗಲಿದೆ. ಈ ತಂಡ ರಾಜ್ಯಾಧ್ಯಂತ ಪ್ರವಾಸ ಕೈಗೊಳ್ಳಲಿದ್ದು, ಪಕ್ಷ ಸಂಘಟನೆಗೆ ಶ್ರಮಿಸಲಿದೆ.

 ಲೋಕಸಭಾ ಚುನಾವಣೆ ನಂತರ  ಜೆಡಿಎಸ್ ರಾಷ್ಟ್ರಮಟ್ಟದಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.