ಬೆಂಗಳೂರು: ಕೇಂದ್ರೀಯ ತನಿಖಾ ಸಂಸ್ಥೆಗಳು ಬಿಜೆಪಿ ಸೇರುವಂತೆ ನನ್ನ ಸಹೋದರ, ಸಚಿವ ಡಿಕೆ ಶಿವಕುಮಾರ್ ಮೇಲೆ ಒತ್ತಡ ಹಾಕುತ್ತಿವೆ ಎಂದು ಡಿಕೆಶಿ ಸಹೋದರ, ಸಂಸದ ಡಿ ಕೆ ಸುರೇಶ್ ಅವರು ಬುಧವಾರ ಆರೋಪಿಸಿದ್ದಾರೆ.
ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆ ಸಹಿಸದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸುರೇಶ್ ದೂರಿದ್ದಾರೆ.
ಅಧಿಕಾರಿಗಳು ಮತ್ತೆ ಬಿಜೆಪಿ ಸೇರುವಂತೆ ಅಥವಾ ತಟಸ್ಥವಾಗಿರುವಂತೆ ಶಿವಕುಮಾರ್ ಅವರನ್ನು ಕೇಳಿಕೊಂಡಿದ್ದಾರೆ ಎಂದು ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿರುವುದರ ಹಿಂದೆ ಕ್ರಿಮಿನಲ್ ಪಿತೂರಿ ಇದೆ ಎಂದು ಸುರೇಶ್ ಆರೋಪಿಸಿದ್ದಾರೆ.
ಪ್ರತಿಪಕ್ಷಗಳ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿಯದೆ, ಕಾನೂನು ಚೌಕಟ್ಟಿನಡಿ ಕೆಲಸ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಸುರೇಶ್ ಹೇಳಿದ್ದಾರೆ.