

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕಲೇಟ್ ಗಿಫ್ಟ್ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಎಕ್ಸ್ ನಲ್ಲಿ ಮೋದಿ ಹಾಗೂ ಮೆಲೋನಿ ಅವರ ವಿಡಿಯೋ ಹಂಚಿಕೊಂಡು ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಮುಖವಾಗಿ, ಇಂಧನ ಹಾಗೂ ಆರ್ಥಿಕ ಬಿಕ್ಕಟ್ಟು ಪರಿಹಾರ ಎಕ್ಕುಟ್ಟಿ ಹೋಗಲಿ. ಆದರೆ ಮೆಲೋನಿ ಅವರಿಗೆ ಮೆಲೋಡಿ ನೀಡುವುದು ತಡವಾಗಬಾರದು ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ 'ಸ್ವಯಂ ಪ್ರಚಾರದ ಗೀಳಿರುವ ಇನ್‌ಫ್ಲುಯೆನ್ಸರ್' ಎಂದು ಟೀಕಿಸಿದ ಖರ್ಗೆ, ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಇಂತಹ 'ಸಿಲ್ಲಿ ರೀಲ್ಸ್' ಮೊರೆ ಹೋಗುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಪ್ರಧಾನಿಯವರ ಇತ್ತೀಚಿನ ವಿದೇಶಿ ಪ್ರವಾಸದ ನಡೆಯನ್ನು ಲೇವಡಿ ಮಾಡಿದ್ದಾರೆ.
"ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಒದಗಿಸುವ ಕಾರ್ಯ ಬೇಕಿದ್ದರೆ ಕಾಯಬಹುದು. ಆದರೆ ಮೆಲೋನಿ ಅವರಿಗೆ 'ಮೆಲೋಡಿ' ತಡವಾಗಬಾರದು! ಇದನ್ನೊಮ್ಮೆ ಊಹಿಸಿಕೊಳ್ಳಿ. ಪ್ರಮುಖ ದ್ವಿಪಕ್ಷೀಯ ವಿಷಯಗಳು ಮತ್ತು ವಿದೇಶಾಂಗ ನೀತಿಯ ಚರ್ಚೆಯ ಮಧ್ಯೆ, ಪ್ರಧಾನಿ ಮೋದಿಯವರು 'ಹೇ, ನನ್ನ ಅಧಿಕೃತ ಭೇಟಿಯಲ್ಲಿ ಒಂದು ಪ್ಯಾಕ್ ಮೆಲೋಡಿ ಚಾಕಲೇಟ್ ಅನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ, ಇದು ವಿಡಿಯೋಗೆ ಉತ್ತಮ ಕಂಟೆಂಟ್ ಆಗಲಿದೆ' ಎಂದು ಯೋಚಿಸಿರಬೇಕು.
ಈ ರೀತಿಯ 'ಸಿಲ್ಲಿ ರೀಲ್' ಜನರ ಗಮನವನ್ನು ದೇಶದ ನೈಜ ಸಮಸ್ಯೆಗಳಿಂದ ಬೇರೆಡೆ ಸೆಳೆಯುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ ನಿಜವಾದ ಜೋಕ್ ಆಗುತ್ತಿರುವುದು ನಮ್ಮೆಲ್ಲರ ಮೇಲೆಯೇ ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
Advertisement