

ನವದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಕನಸಿನ ಯೋಜನೆಯಾದ "ಎಲ್ಲರಿಗೂ ಕಂಪ್ಯೂಟರ್ ವಿಜ್ಞಾನ" (computer science for all) ಯೋಜನೆಗೆ ಭಾರತದ ಮೂರು ಐಟಿ ದಿಗ್ಗಜ ಸಂಸ್ಥೆಗಳು ಕೈಜೋಡಿಸುತ್ತಿವೆ.
ಭಾರತದ ಖ್ಯಾತ ಐಟಿ ಸಂಸ್ಥೆಗಳಾದ ವಿಪ್ರೋ, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಗಳು ಕಂಪ್ಯೂಟರ್ ಸೈನ್ಸ್ ಫಾರ್ ಆಲ್ ಯೋಜನೆಗೆ ಕೈಜೋಡಿಸುತ್ತಿದ್ದು, 3 ಮಿಲಿಯನ್ ಡಾಲರ್ ಹಣವನ್ನು ಇದಕ್ಕಾಗಿ ನಿಯೋಜಿಸುತ್ತಿವೆ. ಶಾಲಾಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನಾರ್ಜನೆಗಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಕೈಗೊಂಡಿರುವ ಈ ಬಹು ನಿರೀಕ್ಷಿತ ಯೋಜನೆಗಾಗಿ ಈ ಮೂರು ಸಂಸ್ಥೆಗಳು ತಲಾ 1 ಮಿಲಿಟನ್ ಡಾಲರ್ ನೆರವನ್ನು ನೀಡಲಿವೆ. ಈ ಹಣದಿಂದ ಅಮೆರಿಕದ ಸುಮಾರು 27 ಜಿಲ್ಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಿ ಅಲ್ಲಿರುವ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ.
ಟಿಸಿಎಸ್ ಸಂಸ್ಥೆ 3000ದಿಂದ 5000 ಸಾವಿರ ಡಾಲರ್ ಹಣವನ್ನು ಶಿಕ್ಷಕರಿಗಾಗಿ ಮೀಸಲಿಟ್ಟಿದ್ದು, ಪ್ರತೀ ವರ್ಷ ಈ ಯೋಜನೆಗಾಗಿ ಹಣ ಮೀಸಲಿಡಲು ನಿರ್ಧರಿಸಿದೆ. ಇನ್ನು ಅಜೀಂ ಪ್ರೇಮ್ ಜೀ ನೇತೃತ್ವದ ವಿಪ್ರೋ ಸಂಸ್ಥೆ ಕೂಡ ಕಂಪ್ಯೂಟರ್ ಶಿಕ್ಷಣಕ್ಕಾಗಿ 2.8 ಮಿಲಿಯನ್ ಡಾಲರ್ ಹಣವನ್ನು ಮೀಸಲಿಡುತ್ತಿದೆ. ವಿಪ್ರೋ ಸಂಸ್ಥೆ ಮಿಚಿಗನ್ ವಿವಿಯೊಂದಿಗೆ ಸೇರಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕಾರ್ಯಕ್ರಮವನ್ನು ಯೋಜಿಸಲಿದೆ.
ಇನ್ನು ಇನ್ಫೋಸಿಸ್ ಸಂಸ್ಥೆ ಕೂಡ ಸುಮಾರು 2000 ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಲಿದೆ ಎಂದು ತಿಳಿದುಬಂದಿದೆ.