ಭೂಮಿಗೆ ಗುರು ಗ್ರಹ ಉತ್ತರ, ದಕ್ಷಿಣ ಧ್ರುವಗಳ ಫೋಟೋ ಕಳುಹಿಸಿದ 'ಜುನೋ'

ಗುರು ಗ್ರಹ ಕುರಿತ ಸಂಶೋಧನೆಗಾಗಿ ಐದು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ "ಜುನೋ" ಗಗನ ನೌಕೆ ಗುರು ಗ್ರಹ...
ಗುರುಗ್ರಹ
ಗುರುಗ್ರಹ
ವಾಷಿಂಗ್ಟನ್: ಗುರು ಗ್ರಹ ಕುರಿತ ಸಂಶೋಧನೆಗಾಗಿ ಐದು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ "ಜುನೋ" ಗಗನ ನೌಕೆ ಗುರು ಗ್ರಹ ಕೆಲವೊಂದು ಫೋಟೋಗಳನ್ನು ಭೂಮಿಗೆ ಕಳುಹಿಸಿದೆ. 
ನಾಸಾದ ಈ ವರೆಗಿನ ಅತ್ಯಂತ ಕಠಿಣ ಯೋಜನೆ ಎಂದೇ ಬಣ್ಣಿಸಲಾಗುತ್ತಿದ್ದ ಜುನೋ ಗಗನ ನೌಕೆ ಜುಲೈ 5 ರಂದು ಗುರು ಗ್ರಹದ ಕಕ್ಷೆ ಸೇರಿತ್ತು. ಇದೀಗ ಗುರು ಗ್ರಹದ ಪ್ರದಕ್ಷಿಣೆ ಹಾಕುತ್ತಿರುವ ಜುನೋ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವಗಳ ಫೋಟೋಗಳನ್ನು ಸೆರೆ ಹಿಡಿದು ಭೂಮಿಗೆ ರವಾನಿಸಿದೆ. 
ಜುನೋ ಗಗನ ನೌಕೆ ಕಳೆದ ಐದು ವರ್ಷಗಳಲ್ಲಿ ಬರೊಬ್ಬರಿ 280 ಕೋಟಿ ಕಿ.ಮೀ. ಪ್ರಯಾಣ ಮಾಡಿದೆ. ಬಾಹ್ಯಾಕಾಶ ನೌಕೆಯೊಂದರ ಸುದೀರ್ಘ ಪ್ರಯಾಣ ಇದಾಗಿದ್ದು, ಸೌರಶಕ್ತಿ ಚಾಲಿತ ನೌಕೆಯಾಗಿದೆ.
ಗುರು ಗ್ರಹದ ಕಕ್ಷೆ ಸೇರಿದ್ದ ಜುನೋ ಸುಮಾರು ಒಂದು ವರ್ಷಗಳ ಕಾಲ ಗುರುಗ್ರಹವನ್ನು ಪ್ರದಕ್ಷಿಣೆ ಹಾಕಲಿದೆ, ಈ ವೇಳೆ ಅಲ್ಲಿನ ಅಪರೂಪದ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ. ಆ ಮೂಲಕ ಗುರು ಗ್ರಹದ ವಾತಾವರಣ ಸಂಶೋಧನೆಗೆ ಇದು ಸಹಕಾರಿಯಾಗಲಿದೆ. ಗುರು ಗ್ರಹದ ವಾತಾವರಣ ಬಹುತೇಕ ಜಲಜನಕ ಮತ್ತು ಹೀಲಿಯಂ ಮುಂತಾದವುಗಳಿಂದಲೇ ಕೂಡಿದ್ದು,  ಮಂಗಳ ಗ್ರಹಕ್ಕೆ ಸಮೀಪದಲ್ಲಿರುವ ಈ ಗುರು ಗ್ರಹ ಸೌರ ಮಂಡಲದ ಐದನೇ ಗ್ರಹವಾಗಿದೆ. ಗುರುಗ್ರಹದ ಕಕ್ಷೆ ಸೇರಿರುವ "ಜುನೋ" ನೌಕೆ ಆ ಗ್ರಹದಲ್ಲಿ ನೀರಿನ ಅಂಶ ಸೇರಿದಂತೆ ಮೇಲ್ಮೈ  ವಾತಾವರಣ ಸೇರಿದಂತೆ ಹಲವು ಅಂಶಗಳ ಕುರಿತು ಪತ್ತೆ ಹಚ್ಚುವ ಪ್ರಯತ್ನ ಮಾಡಲಿದೆ.
ಸೌರ ಮಂಡಲ ರಚನೆ ಹಾಗೂ ಗುರುಗ್ರಹದ ರಚನೆ ಹೇಗಾಯ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಜುನೋ ನೌಕೆ ಕಳುಹಿಸುವ ಚಿತ್ರ ಹಾಗೂ ದತ್ತಾಂಶಗಳು ಸಹಕಾರಿಯಾಗಲಿವೆ. ಈ  ಯೋಜನೆಗಾಗಿ ನಾಸಾ ಬರೊಬ್ಬರಿ 110 ಕೋಟಿ ಡಾಲರ್ ವೆಚ್ಚ ಮಾಡಿದ್ದು, ಒಂದು ವರ್ಷಗಳ ನಿರಂತರ ಅಧ್ಯಯನದ ಬಳಿಕ ಈ ನೌಕೆಯು 2018ರ ವೇಳೆಗೆ ಗುರುಗ್ರಹದ ಚಂದ್ರನಿಗೆ ಡಿಕ್ಕಿ ಹೊಡೆದು ನಾಶವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com