

ನವದೆಹಲಿ: ಕೇವಲ ಒಂದೂ ವರ್ಷದ ಅವಧಿಯಲ್ಲಿ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ಉಗ್ರತ್ವದ ಕುರಿತು ಪ್ರಚೋಧನಾತ್ಮಕ ವಿಚಾರಗಳಿದ್ದ ಸುಮಾರು 6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಟ್ವಿಟರ್ ತನ್ನ ಪಾರದರ್ಶಕತೆ ವರದಿಯಲ್ಲಿ ಈ ಅಂಶವನ್ನು ಉಲ್ಲೇಖ ಮಾಡಿದ್ದು, 2015ರ ಆಗಸ್ಟ್ 1ರಿಂದ 2016 ಮಾರ್ಚ್ ತಿಂಗಳವರೆಗೂ ಟ್ವಿಟರ್ ಸುಮಾರು 6, 36,248 ಖಾತೆಗಳನ್ನು ನಿರ್ಬಂಧಿಸಿದೆ. ಈ ಎಲ್ಲ ಖಾತೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉಗ್ರವಾದವನ್ನು ಪ್ರತಿನಿಧಿಸುವ ಮತ್ತು ಪ್ರತ್ಸಾಹಿಸುವಂತಹ ಮಾಹಿತಿಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು ಎಂದು ಟ್ವಿಟರ್ ಹೇಳಿಕೊಂಡಿದೆ. ಈ ಹಿಂದೆಯೂ ಕೂಡ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದೆ ಸುಮಾರು 125,000 ಖಾತೆಗಳನ್ನು ನಿರ್ಬಂಧಿಸಿರುವುದಾಗಿ ಟ್ವಿಟರ್ 2016ರಲ್ಲಿ ಹೇಳಿಕೊಂಡಿತ್ತು.
ಟ್ವಿಟರ್ ಸಂಸ್ಥೆ ಜಾಗತಿಕವಾಗಿ ತನ್ನ ಸಾರ್ವಜನಿಕ ನೀತಿ ನಿರ್ವಹಣಾ ತಂಡದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು, ಈ ತಂಡಗಳ ಮೂಲಕ ಹಿಂಸಾತ್ಮಕ ಪ್ರವೃತ್ತಿಯ ಖಾತೆಗಳನ್ನು ಗುರುತಿಸಿ ಅವುಗಳನ್ನು ನಿರ್ಬಂಧಿಸುವ ಕಾರ್ಯ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ತಜ್ಞರು ಹೇಳುವುದೇ ಬೇರೆಯಾಗಿದ್ದು, ಟ್ವಿಟರ್ ನಲ್ಲಿ ಪೋಸ್ಟ್ ಆಗುವ ಪ್ರತೀ ಸಂದೇಶದ ಮೇಲೂ ನಿಗಾ ಇಡಲು ಯಾವುದೇ ಸಾಧ್ಯವಿಲ್ಲ. ಹಾಗೊಂದು ವೇಳೆ ಪ್ರತೀ ಸಂದೇಶದ ಮೇಲೂ ನಿಗಾಇಡಲು ಮಂತ್ರವಿಧ್ಯೆ ಮಾಡಬೇಕಾಗುತ್ತದೆ. ಪ್ರಸ್ತುತ ಇರುವ ನಿಗಾ ಕ್ರಮಗಳು ಬಹಳ ಸೀಮಿತ ಮಾಹಿತಿ ಮಾತ್ರ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.